ಹಿಂಡೆನ್ ಬರ್ಗ್ ರಿಸರ್ಚ್ ಸಂಸ್ಥೆಯನ್ನು ವಿಸರ್ಜಿಸಿದ ನಾಥನ್ ಆಂಡರ್ಸನ್
ಹೊಸದಿಲ್ಲಿ: ಅದಾನಿ ಗ್ರೂಪ್ ಸೇರಿದಂತೆ ಹಲವಾರು ವ್ಯಾಪಾರ ಘಟಕಗಳನ್ನು ಗುರಿಯಾಗಿಸಿಕೊಂಡಿದ್ದ US ಮೂಲದ ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆಯನ್ನು ವಿಸರ್ಜಿಸುವುದಾಗಿ ಸಂಸ್ಥಾಪಕ ನಾಥನ್ ಆಂಡರ್ಸನ್ ಘೋಷಿಸಿದ್ದಾರೆ.
ನಾನು ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆಯನ್ನು ವಿಸರ್ಜಿಸುವ ನಿರ್ಧಾರವನ್ನು ಮಾಡಿದ್ದೇನೆ ಎಂದು ಹಿಂಡೆನ್ ಬರ್ಗ್ ವೆಬ್ಸೈಟ್ ನಲ್ಲಿನ ಟಿಪ್ಪಣಿಯಲ್ಲಿ ನಾಥನ್ ಆಂಡರ್ಸನ್ ತಿಳಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ನಡೆದ ಈ ಬೆಳವಣಿಗೆಗೆ ಯಾವುದೇ ನಿರ್ದಿಷ್ಟ ಬೆದರಿಕೆ ಅಥವಾ ವೈಯಕ್ತಿಕ ಕಾರಣಗಳು ಇಲ್ಲ ಎಂದು ಆಂಡರ್ಸನ್ ಸ್ಪಷ್ಟಪಡಿಸಿದ್ದಾರೆ.
ನಾಥನ್ ಆಂಡರ್ಸನ್ 2017ರಲ್ಲಿ ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಭಾರತದ ಅದಾನಿ ಗ್ರೂಪ್ ಮತ್ತು U.S. ಮೂಲದ ನಿಕೋಲಾ ಸೇರಿದಂತೆ ಹಲವಾರು ವ್ಯಾಪಾರ ಘಟಕಗಳ ಅವ್ಯವಹಾರವನ್ನು ಸಾಕ್ಷಿ ಸಮೇತ ಈ ಸಂಸ್ಥೆ ಬಯಲಿಗೆಳೆದಿತ್ತು.
ಹಿಂಡನ್ ಬರ್ಗ್ ರಿಸರ್ಚ್ ಸಂಸ್ಥೆಯ ವಿಸರ್ಜನೆ ಕುರಿತ ಟಿಪ್ಪಣಿಯಲ್ಲಿ ನಾಥನ್ ಆಂಡರ್ಸನ್ ಕೆಲ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ʼ ಸಂಸ್ಥೆಯನ್ನು ಕಟ್ಟುವುದು ಜೀವನದ ಕನಸಾಗಿತ್ತು. ಸಾರ್ಥಕ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯ ಎಂದು ನನಗೆ ಆರಂಭದಲ್ಲಿ ತಿಳಿದಿರಲಿಲ್ಲ. ಇದು ಸುಲಭದ ಆಯ್ಕೆಯಾಗಿರಲಿಲ್ಲ. ಆದರೆ ನಾನು ಈಗ ಎಲ್ಲವನ್ನೂ ಪ್ರೇಮಕಥೆಯಾಗಿ ನೋಡುತ್ತೇನೆ. ನನ್ನ ಪತ್ನಿ, ನೀವು ನನ್ನೊಂದಿಗೆ ತುಂಬಾ ತಾಳ್ಮೆಯಿಂದ ಸಹಕರಿಸಿದ್ದೀರಿ. ಅದನ್ನು ಲಘುವಾಗಿ ಹೇಳುವುದು ಸುಲಭವಲ್ಲ ಮತ್ತು ನೀವು ತುಂಬಾ ತ್ಯಾಗ ಮಾಡಿ ನನ್ನೊಂದಿಗೆ ಮುನ್ನಡೆದಿದ್ದಕ್ಕಾಗಿ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಕುಟುಂಬ ಮತ್ತು ಸ್ನೇಹಿತರೇ, ನಾನು ನಿಮ್ಮನ್ನು ನಿರ್ಲಕ್ಷಿಸಿದ ಸಮಯಕ್ಕಾಗಿ ಕ್ಷಮಿಸಿ. ನಿಮ್ಮೊಂದಿಗೆ ಹಂಚಿಕೊಳ್ಳಲು ಹೆಚ್ಚಿನ ಸಮಯವನ್ನು ಹೊಂದಲು ನಾನು ಕಾಯಲು ಸಾಧ್ಯವಿಲ್ಲ. ಕೊನೆಯದಾಗಿ, ನಮ್ಮ ಓದುಗರಿಗೆ ನಾನು ಬಹಳ ಕೃತಜ್ಞನಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಅವರು ಅದಾನಿ ಸಮೂಹದ ಸಾಗರೋತ್ತರ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಅಮೆರಿಕಾದ ಕಿರು ಅವಧಿಯ ಮಾರಾಟ ಸಂಸ್ಥೆ ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆಯ ಇತ್ತೀಚೆಗೆ ಆರೋಪಿಸಿತ್ತು. ಈ ಆರೋಪ ಭಾರತದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಅದಾನಿ ಕಂಪೆನಿಗಳ ಷೇರ್ ಗಳನ್ನು ಹೆಚ್ಚಿಸಲು ಉಪಯೋಗಿಸಲಾಗಿದೆ ಎನ್ನಲಾದ ಬರ್ಮುಡ ಮತ್ತು ಮಾರಿಶಸ್ ಮೂಲದ ಆಫ್ ಶೋರ್ ಫಂಡ್ ಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಪಾಲು ಹೊಂದಿದ್ದಾರೆ ಎಂದು ಹಿಂಡನ್ ಬರ್ಗ್ ದಾಖಲೆಗಳ ಸಹಿತ ಆರೋಪಿಸಿತ್ತು. ಯಾರು ಷೇರು ಮಾರುಕಟ್ಟೆಯಲ್ಲಿ ಭ್ರಷ್ಟಾಚಾರ ನಿಲ್ಲಿಸಬೇಕಿತ್ತೋ ಅವರೇ ಭ್ರಷ್ಟರು ಎಂದು ಹಿಂಡನ್ ಬರ್ಗ್ ವರದಿಯು ಹೇಳಿತ್ತು. ಇದಕ್ಕೂ ಮೊದಲು ಅದಾನಿ ಸಮೂಹವು ಷೇರುಗಳ ಅಕ್ರಮದಲ್ಲಿ ತೊಡಗಿಕೊಂಡಿರುವುದಲ್ಲದೆ ದಶಕಗಳಿಂದ ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಹಿಂಡನ್ ಬರ್ಗ್ ರಿಸರ್ಚ್ ವರದಿ ಆರೋಪಿಸಿತ್ತು.