ಅಮೆರಿಕದಲ್ಲಿ ಸ್ವಜನಪಕ್ಷಪಾತ ರೂಪುಗೊಳ್ಳುತ್ತಿದೆ: ವಿದಾಯ ಭಾಷಣದಲ್ಲಿ ಬೈಡನ್
ವಾಷಿಂಗ್ಟನ್: ಅಮೆರಿಕದ ನಿರ್ಗಮನ ಅಧ್ಯಕ್ಷ ಜೋ ಬೈಡನ್ ಅವರು ಬುಧವಾರ ತಮ್ಮ ಓವಲ್ ಕಚೇರಿಯಿಂದ ರಾಷ್ಟ್ರವನ್ನು ಉದ್ದೇಶಿಸಿ ವಿದಾಯ ಭಾಷಣ ಮಾಡಿದ್ದು, "ಅಮೆರಿಕದ ಕೆಲವೇ ಶ್ರೀಮಂತರ ಕೈಯಲ್ಲಿ ಅಧಿಕಾರದ ಅಪಾಯಕಾರಿ ಕೇಂದ್ರೀಕರಣ" ನಡೆಯುತ್ತಿದೆ ಎಂದು ಅಮೆರಿಕದ ಜನತೆಯನ್ನು ಎಚ್ಚರಿಸಿದ್ದಾರೆ.
"ಇಂದು ಅಮೆರಿಕದಲ್ಲಿ ಸ್ವಜನಪಕ್ಷಪಾತ ರೂಪುಗೊಳ್ಳುತ್ತಿದೆ. ಅತಿ ಶ್ರೀಮಂತಿಕೆ, ಅಧಿಕಾರ ಹಾಗೂ ಪ್ರಭಾವ ನಮ್ಮ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯ ಸೇರಿದಂತೆ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ" ಎಂದು ಹೇಳಿದರು.
ತಪ್ಪು ಮಾಹಿತಿಗಳಿಗೆ ಬಲಿಯಾಗುವ ಬಗ್ಗೆ ಕೂಡಾ ಅಮೆರಿಕನ್ನರನ್ನು ಎಚ್ಚರಿಸಿದ ಅವರು, ಕೆಲವೇ ದಿನಗಳಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದು, ಪತ್ರಿಕಾ ಸ್ವಾತಂತ್ರ್ಯ ಹದಗೆಡುತ್ತಿದೆ ಎಂದು ದೂರಿದರು.
ಅಮೆರಿಕನ್ನರು ತಪ್ಪು ಮಾಹಿತಿ ಹಾಗೂ ಮಾಹಿತಿ ಕೊರತೆಯ ಪ್ರವಾಹದಲ್ಲಿ ಮುಳುಗಿದ್ದು, ಅಧಿಕಾರದ ದುರ್ಬಳಕೆ ಆಗುತ್ತಿದೆ. ಮುಕ್ತ ಪತ್ರಿಕಾರಂಗ ಬುಡಮೇಲಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.
ಸತ್ಯಶೋಧನೆಯನ್ನು ಸಾಮಾಜಿಕ ಜಾಲತಾಣಗಳು ಕೈಬಿಡುತ್ತಿವೆ. ಅಧಿಕಾರ ಹಾಗೂ ಲಾಭಕ್ಕಾಗಿ ಸತ್ಯವನ್ನು ಸುಳ್ಳು ಹಿಸುಕಿ ಹಾಕುತ್ತಿದೆ. ನಮ್ಮ ಮಕ್ಕಳು, ನಮ್ಮ ಕುಟುಂಬ ಹಾಗೂ ಇಡೀ ಪ್ರಜಾಪ್ರಭುತ್ವವನ್ನು ಅಧಿಕಾರ ದುರ್ಬಳಕೆಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.