ಗಾಝಾದಲ್ಲಿ 3 ತಿಂಗಳಲ್ಲಿ 79 ಪತ್ರಕರ್ತರ ಮೃತ್ಯು ; ಪತ್ರಕರ್ತರ ಸಾವಿನ ತನಿಖೆ ಆರಂಭಿಸಿದ ಐಸಿಸಿ

Update: 2024-01-10 16:23 GMT

Photo: PTI

ಹೇಗ್: ಮುತ್ತಿಗೆಗೆ ಒಳಗಾಗಿರುವ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ನ ನಿರಂತರ ಆಕ್ರಮಣದ ನಡುವೆ ಪತ್ರಕರ್ತರ ವಿರುದ್ಧದ ಸಂಭಾವ್ಯ ಅಪರಾಧಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ದೃಢಪಡಿಸಿದೆ.

ಕಳೆದ ಅಕ್ಟೋಬರ್ 7ರಿಂದ ಇಸ್ರೇಲ್-ಹಮಾಸ್ ನಡುವೆ ಗಾಝಾದಲ್ಲಿ ಮುಂದುವರಿದಿರುವ ಸಂಘರ್ಷದ ಬಗ್ಗೆ ವರದಿ ಮಾಡುತ್ತಿದ್ದಾಗ ಪತ್ರಕರ್ತರ ವಿರುದ್ಧ ನಡೆದ ಯುದ್ಧಾಪರಾಧ ಹಾಗೂ ಪತ್ರಕರ್ತರ ಸಾವಿನ ಕುರಿತು ತನಿಖೆ ನಡೆಸಲು ಆಗ್ರಹಿಸಿ `ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್(ಆರ್ಎಸ್ಎಫ್)' ಎಂಬ ಪತ್ರಕರ್ತರ ಹಿತರಕ್ಷಣಾ ಸಂಘಟನೆ ಕಳೆದ ನವೆಂಬರ್ನಲ್ಲಿ ಐಸಿಸಿಗೆ ದೂರು ಸಲ್ಲಿಸಿದೆ.

ಗಾಝಾ ಯುದ್ಧವು ಪತ್ರಕರ್ತರಿಗೆ ಅತ್ಯಂತ ಮಾರಣಾಂತಿಕವಾಗಿದ್ದು ಒಂದೇ ಪ್ರದೇಶದಲ್ಲಿ ಅತ್ಯಧಿಕ ಪತ್ರಕರ್ತರು ಹತರಾದ ದಾಖಲೆಯನ್ನು ಸ್ಥಾಪಿಸಿದೆ. ಗಾಝಾ ಯುದ್ಧದಲ್ಲಿ ಮೃತಪಟ್ಟ ಪತ್ರಕರ್ತರು ಹಾಗೂ ಮಾಧ್ಯಮ ಸಿಬಂದಿಗಳಲ್ಲಿ ಹೆಚ್ಚಿನವರು ಫೆಲೆಸ್ತೀನೀಯರು. ಪತ್ರಕರ್ತರು ಮತ್ತು ಅವರ ಕುಟುಂಬದವರನ್ನು ಗುರಿಯಾಗಿಸುವ ಇಸ್ರೇಲ್ ಸೇನೆಯ ಕಾರ್ಯಾಚರಣೆ ಅತ್ಯಂತ ಕಳವಳಕಾರಿಯಾಗಿದ್ದು ಪತ್ರಕರ್ತರ ವಿರುದ್ಧದ ಅಪರಾಧವನ್ನು ಫೆಲೆಸ್ತೀನ್ ಕುರಿತು ತಾನು ನಡೆಸುವ ತನಿಖೆಯಲ್ಲಿ ಸೇರಿಸಿರುವುದಾಗಿ ಐಸಿಸಿ ದೃಢಪಡಿಸಿದೆ ಎಂದು ಆರ್ಎಸ್ಎಫ್ ಹೇಳಿದೆ.

ಎಲ್ಲಾ ಪತ್ರಕರ್ತರ ಸಾವಿನ ಸಂದರ್ಭಗಳನ್ನು ತನಿಖೆ ನಡೆಸಲಾಗುವುದು. ಆದರೆ ಗಾಝಾದಲ್ಲಿ ಇಂತಹ ಪ್ರಯತ್ನಕ್ಕೆ ವ್ಯಾಪಕ ವಿನಾಶ ಮತ್ತು ಪತ್ರಕರ್ತರ ಕುಟುಂಬದ ಸದಸ್ಯರ ಹತ್ಯೆಯು ಅಡ್ಡಿಯಾಗಿದೆ ಎಂದು ಐಸಿಸಿ ಹೇಳಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಗಾಝಾದಲ್ಲಿ ಅಕ್ಟೋಬರ್ 7 ರಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಕನಿಷ್ಟ 79 ಪತ್ರಕರ್ತರು ಮೃತರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News