ಗಾಝಾ ಪ್ರವೇಶಕ್ಕೆ ವಿದೇಶಿ ಮಾಧ್ಯಮದ ಮನವಿ ನಿರಾಕರಿಸಿದ ಇಸ್ರೇಲ್ ಸುಪ್ರೀಂಕೋರ್ಟ್
ಟೆಲ್ಅವೀವ್ : ಯುದ್ಧಗ್ರಸ್ತ ಗಾಝಾ ಪಟ್ಟಿಗೆ ಪತ್ರಕರ್ತರಿಗೆ ಸ್ವತಂತ್ರ ಪ್ರವೇಶವನ್ನು ಅನುಮತಿಸಲು ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಮನವಿಯನ್ನು ಇಸ್ರೇಲ್ ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಮುತ್ತಿಗೆಗೆ ಒಳಗಾಗಿರುವ ಫೆಲೆಸ್ತೀನಿಯನ್ ಪ್ರದೇಶಕ್ಕೆ ಪ್ರವೇಶವನ್ನು ಇಸ್ರೇಲ್ ನಿಯಂತ್ರಿಸುತ್ತಿದೆ ಮತ್ತು ಅಕ್ಟೋಬರ್ 7ರ ಬಳಿಕ ಅಲ್ಲಿಗೆ ಪತ್ರಕರ್ತರು ಸ್ವತಂತ್ರವಾಗಿ ಪ್ರಯಾಣಿಸಲು ಅವಕಾಶ ನೀಡುತ್ತಿಲ್ಲ. ಭದ್ರತೆಯ ಕಾರಣಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ಸುಪ್ರೀಂಕೋರ್ಟ್ ನಲ್ಲಿ ಇಸ್ರೇಲ್ ಅಧಿಕಾರಿಗಳು ವಾದ ಮಂಡಿಸಿದರು. `ಗಾಝಾದೊಳಗೆ ಪತ್ರಕರ್ತರು ಯುದ್ಧದ ಬಗ್ಗೆ ವರದಿ ಮಾಡುವುದು ಇಸ್ರೇಲಿ ಯೋಧರನ್ನು ಅಪಾಯಕ್ಕೆ ಗುರಿಯಾಗಿಸಬಹುದು. ಇಸ್ರೇಲ್ ಸೇನೆಯ ಕಾರ್ಯಾಚರಣೆಯ ವಿವರವನ್ನು ಬಹಿರಂಗಪಡಿಸುವುದು, ಇಸ್ರೇಲ್ ತುಕಡಿಯನ್ನು ನಿಯೋಜಿಸಿರುವ ಪ್ರದೇಶದ ಬಗ್ಗೆ ಮಾಹಿತಿ ಒದಗಿಸುವುದು ಇಸ್ರೇಲ್ ಯೋಧರನ್ನು ನಿಜಕ್ಕೂ ಅಪಾಯಕ್ಕೆ ಸಿಲುಕಿಸಬಹುದು. ಪತ್ರಕರ್ತರು ಮತ್ತು ಯೋಧರ ಸುರಕ್ಷತೆಯ ನಡುವೆ `ಪತ್ರಿಕಾ ಸ್ವಾತಂತ್ರ್ಯದೊಂದಿಗೆ ಸಮತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಇಸ್ರೇಲ್ ಸೇನೆಯ ಬೆಂಗಾವಲಿನಲ್ಲಿ ವಿದೇಶಿ ಮತ್ತು ಇಸ್ರೇಲಿ ಪತ್ರಕರ್ತರಿಗೆ ಗಾಝಾಕ್ಕೆ ಸೀಮಿತ ಪ್ರವೇಶಾವಕಾಶ ಒದಗಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ.
ನ್ಯಾಯಾಲಯದ ತೀರ್ಪಿನಿಂದ ನಿರಾಸೆಯಾಗಿದೆ ಎಂದು `ದಿ ಫಾರಿನ್ ಪ್ರೆಸ್ ಅಸೋಸಿಯೇಷನ್(ಎಫ್ಪಿಎ) ಹೇಳಿದೆ. ಇಸ್ರೇಲ್ ಮತ್ತು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಯಾಗಿ ಎಫ್ಪಿಎ ಇಸ್ರೇಲ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.