ʼಹಮಾಸ್ ನವರು ನಮ್ಮೊಂದಿಗೆ ಕರುಣೆಯಿಂದ ವರ್ತಿಸಿದರು, ಧನ್ಯವಾದ ತಿಳಿಸಲು ಹಸ್ತಲಾಘವ ಮಾಡಿದೆʼ
ಜೆರುಸಲೆಂ: ಹಮಾಸ್ ತಾನು ಗಾಝಾದಲ್ಲಿ ಒತ್ತೆಯಾಳಾಗಿ ಇರಿಸಿದ್ದ ಇಬ್ಬರು ಇಸ್ರೇಲಿ ಮಹಿಳೆಯರನ್ನು ಬಿಡುಗಡೆಗೊಳಿಸಿದೆ. ಮಾನವೀಯ ನೆಲೆಯಲ್ಲಿ ಹಾಗೂ ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿ ಹಮಾಸ್ ಬಿಡುಗಡೆಗೊಳಿಸಿತು ಎಂದು ವರದಿಯಾಗಿದೆ. ಬಿಡುಗಡೆಗೊಳ್ಳುವ ಸಂದರ್ಭ ಹಿರಿಯ ಇಸ್ರೇಲಿ ಮಹಿಳೆ ಲಿಫ್ ಶಿಟ್ಜ್ ಅವರು ಹಮಾಸ್ ಹೋರಾಟಗಾರರಿಗೆ ಹಸ್ತಲಾಘವ ಮಾಡಿದ ವೀಡಿಯೋ ಈಗ ವೈರಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಲಿಫ್‌ಶಿಟ್ಜ್ ಅವರು, ‘ಅಪಹರಣವಾದಾಗ ನಾವು ಹಲ್ಲೆಗೊಳಗಾಗಿದ್ದು ಬಿಟ್ಟರೆ, ಹಮಾಸ್ ನಮ್ಮೆಡೆಗೆ ಕರುಣೆ ತೋರಿಸಿತು. ವೈದ್ಯರನ್ನು ಕರೆಸಿ, ಔಷಧಿ ಸೇರಿದಂತೆ ವೈದ್ಯಕೀಯ ಆರೈಕೆಯನ್ನು ನೀಡಿದರು. ನಮ್ಮೊಂದಿಗೆ ಸೌಜನ್ಯವಾಗಿ ನಡೆದುಕೊಂಡರು. ಅದಕ್ಕಾಗಿ ನಾನು ಬಿಡುಗಡೆಗೊಂಡಾಗ ಧನ್ಯವಾದ ತಿಳಿಸಲು ಹಸ್ತಲಾಘವ ಮಾಡಿದೆʼ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ ಎಂದು theguardian.com ವರದಿ ಮಾಡಿದೆ.
ಈ ಹೇಳಿಕೆ ವೈರಲಾದ ಬಳಿಕ, ಪ್ರತಿಕ್ರಿಯಿಸಿದ ಜನರು ಇದು ಹಮಾಸ್ ಹಾಗೂ ಇಸ್ರೇಲ್ ಸೇನೆಗಿರುವ ವ್ಯತ್ಯಾಸ ಎಂದು ಇಸ್ರೇಲ್ ಅನ್ನು ಟೀಕಿಸಿದ್ದಾರೆ. ಇಸ್ರೇಲ್ ಗಾಝಾದಲ್ಲಿ ಆಸ್ಪತ್ರೆ ಸೇರಿದಂತೆ ಅಮಾಯಕ ಜನರ ಮೇಲೆ ವೈಮಾನಿಕ ದಾಳಿ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಶಾಂತಿ ಮಾತುಕತೆ ನಡೆಸಬೇಕು ಎಂಬ ಕೂಗು ಹೆಚ್ಚಿದೆ.
ಅ.7ರಿಂದ ಇಸ್ರೇಲ್ ಫೆಲೆಸ್ತೀನ್ ಮೇಲೆ ಪ್ರಾರಂಭಿಸಿರುವ 18ನೇ ದಿನಕ್ಕೆ ಕಾಲಿಟ್ಟಿದೆ. ಮಾನವೀಯ ಕಾರಣಗಳಿಗಾಗಿ ಇಬ್ಬರು ಮಹಿಳಾ ಒತ್ತೆಯಾಳುಗಳನ್ನು ಹಮಾಸ್ ಸೋಮವಾರ ರಾತ್ರಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಒತ್ತೆಯಾಳುಗಳನ್ನು ನೂರಿಟ್ ಕೂಪರ್ (79) ಮತ್ತು ಯೋಚೆವೆಡ್ ಲಿಫ್‌ಶಿಟ್ಜ್ (85) ಎಂದು ಗುರುತಿಸಲಾಗಿದೆ.
ಗಾಝಾ ಗಡಿಯ ಸಮೀಪವಿರುವ ನಿರ್ ಓಜ್‌ನ ಕಿಬ್ಬತ್ಜ್‌ನಲ್ಲಿ ಈ ಇಬ್ಬರು ಮಹಿಳೆಯರನ್ನು ಅವರ ಗಂಡಂದಿರ ಜೊತೆ ಅವರ ಮನೆಗಳಿಂದ ಹಮಾಸ್ ವಶಕ್ಕೆ ಪಡೆದುಕೊಂಡಿತ್ತು. ಇಂಟರ್ ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್ ಒತ್ತೆಯಾಳುಗಳ ಬಿಡುಗಡೆಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಇದರ ಭಾಗವಾಗಿ ಹಮಾಸ್‌ನೊಂದಿಗಿನ ಮೊದಲ ಹಂತದ ಮಾತುಕತೆ ಫಲಪ್ರದವಾಗಿದೆ. ಈ ಯಶಸ್ಸಿನ ಬಳಿಕ, ಇಂತಹ ಮಾತುಕತೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ರೆಡ್‌ಕ್ರಾಸ್ ಹರ್ಷ ವ್ಯಕ್ತಪಡಿಸಿದೆ.