ಕೇವಲ ಶೇ.15ರಷ್ಟು ಇಸ್ರೇಲಿಗಳು ಗಾಝಾ ಯುದ್ಧದ ಬಳಿಕವೂ ನೆತನ್ಯಾಹು ಪ್ರಧಾನಿ ಹುದ್ದೆಯಲ್ಲಿರಬೇಕು ಎಂದು ಬಯಸಿದ್ದಾರೆ: ಸಮೀಕ್ಷೆ

Update: 2024-01-03 12:02 GMT

ಬೆಂಜಮಿನ್ ನೆತನ್ಯಾಹು | Photo: PTI  

ಜೆರುಸಲೇಮ್: ಕೇವಲ ಶೇ.15ರಷ್ಟು ಇಸ್ರೇಲಿಗಳು ಗಾಝಾ ಯುದ್ಧದ ಬಳಿಕವೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಬಯಸಿದ್ದಾರೆ ಎಂದು ಮಂಗಳವಾರ ಪ್ರಕಟಗೊಂಡ ಸಮೀಕ್ಷೆ ವರದಿಯು ತಿಳಿಸಿದೆ.

ಇಸ್ರೇಲ್ ಡೆಮಾಕ್ರಸಿ ಇನ್‌ಸ್ಟಿಟ್ಯೂಟ್ (ಐಡಿಐ) ನಡೆಸಿದ್ದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇ.56ರಷ್ಟು ಜನರು ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಗಾಝಾದ ಮೇಲೆ ಮಿಲಿಟರಿ ಆಕ್ರಮಣವನ್ನು ಮುಂದುವರಿಸುವುದು ಅತ್ಯುತ್ತಮ ಮಾರ್ಗವಾಗಿದೆ ಎಂದು ಹೇಳಿದ್ದಾರೆ. ಗಾಝಾದಲ್ಲಿ ಈಗಲೂ 129 ಜನರು ಒತ್ತೆಯಾಳುಗಳಾಗಿದ್ದಾರೆ.

ಶೇ.24ರಷ್ಟು ಜನರು ಒತ್ತೆಯಾಳುಗಳನ್ನು ವಿಮೋಚನೆಗೊಳಿಸಲು ಇಸ್ರೇಲ್‌ನ ಜೈಲುಗಳಲ್ಲಿರುವ ಸಾವಿರಾರು ಫೆಲೆಸ್ತೀನಿ ಕೈದಿಗಳ ಬಿಡುಗಡೆ ಸೇರಿದಂತೆ ವಿನಿಮಯ ಒಪ್ಪಂದ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಕೇವಲ ಶೇ.15ರಷ್ಟು ಜನರು ಯುದ್ಧ ಮುಗಿದ ಬಳಿಕ ನೆತನ್ಯಾಹು ಅವರೇ ಪ್ರಧಾನಿ ಹುದ್ದೆಯಲ್ಲಿರಬೇಕು ಎಂದು ಬಯಸಿದ್ದಾರೆ ಎಂದು ಸಮೀಕ್ಷೆಯು ತೋರಿಸಿದೆ. ಅವರ ರಾಜಕೀಯ ಪ್ರತಿಸ್ಪರ್ಧಿ ಮತ್ತು ಪ್ರಸ್ತುತ ಯುದ್ಧ ಸಂಪುಟದ ಪಾಲುದಾರ ಬೆನ್ನಿ ಗಾಂಝ್ ಅವರನ್ನು ಶೇ.23ರಷ್ಟು ಜನರು ಬೆಂಬಲಿಸಿದ್ದಾರೆ. ಶೇ.30ರಷ್ಟು ಜನರು ಯಾವುದೇ ಆದ್ಯತೆಯ ನಾಯಕನನ್ನು ಹೆಸರಿಸಲಿಲ್ಲ.

ಡಿ.25 ಮತ್ತು 28ರ ನಡುವೆ ನಡೆಸಲಾದ ಸಮೀಕ್ಷೆಯಲ್ಲಿ 746 ಜನರು ಪಾಲ್ಗೊಂಡಿದ್ದರು. ಐಡಿಐ ಡಿಸೆಂಬರ್‌ನಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಶೇ.69ರಷ್ಟು ಜನರು ಯುದ್ಧವು ಮುಗಿದ ತಕ್ಷಣ ಚುನಾವಣೆಗಳನ್ನು ನಡೆಸಬೇಕು ಎಂದು ಹೇಳಿದ್ದರು.

ಗೆಲುವು ಸಾಧಿಸಲು ಇನ್ನೂ ಹಲವು ತಿಂಗಳುಗಳು ಬೇಕು ಎಂದು ನೆತನ್ಯಾಹು ಶನಿವಾರ ಹೇಳಿದ್ದರು. ಆಗಾಗ್ಗೆ ನಡೆಸಲಾದ ಸಮೀಕ್ಷೆಗಳು ಅ.7ರಂದು ಹಮಾಸ್‌ ದಾಳಿಯ ಬಳಿಕ ನೆತನ್ಯಾಹು ಜನಪ್ರಿಯತೆ ತೀವ್ರವಾಗಿ ಕುಸಿದಿದೆ ಎನ್ನುವುದನ್ನು ತೋರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News