ಪಾಶ್ಚಿಮಾತ್ಯ ಪ್ರಾಬಲ್ಯವನ್ನು ಎದುರಿಸಲು ಹೊಸ ವ್ಯವಸ್ಥೆ ಅತ್ಯಗತ್ಯ : ಬ್ರಿಕ್ಸ್ ಶೃಂಗಸಭೆಯಲ್ಲಿ ರಶ್ಯ ಅಧ್ಯಕ್ಷ ಪುಟಿನ್ ಪ್ರತಿಪಾದನೆ

Update: 2024-10-23 16:02 GMT

 ರಶ್ಯ ಅಧ್ಯಕ್ಷ ಪುಟಿನ್ | PC : PTI 

ಕಝಾನ್ : ರಶ್ಯದ ಕಝಾನ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯು `ಇದುವರೆಗೆ ನಡೆದ ಅತೀ ದೊಡ್ಡ ವಿದೇಶಾಂಗ ನೀತಿ ಕಾರ್ಯಕ್ರಮವಾಗಿದೆ. ಪಾಶ್ಚಿಮಾತ್ಯ ಪ್ರಾಬಲ್ಯದ ಜಾಗತಿಕ ಕ್ರಮಕ್ಕೆ ಸಮಾನಾಂತರವಾಗಿ ಬ್ರಿಕ್ಸ್ ಗುರುತಿಸಿಕೊಂಡಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಮುಖಂಡರನ್ನು ಗಮನಿಸಿದರೆ ಜಾಗತಿಕ ವೇದಿಕೆಯಲ್ಲಿ ರಶ್ಯವನ್ನು ಒಬ್ಬಂಟಿಯಾಗಿಸುವ ಪ್ರಯತ್ನಗಳ ವೈಫಲ್ಯ ಸ್ಪಷ್ಟವಾಗಿದೆʼ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.

ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಬಹುಧ್ರುವೀಯ ಜಾಗತಿಕ ಕ್ರಮವನ್ನು ರೂಪಿಸುವ ಪ್ರಕ್ರಿಯೆಯು ನಡೆಯುತ್ತಿದೆ. ಇದು ಕ್ರಿಯಾತ್ಮಕ ಮತ್ತು ಬದಲಾಯಿಸಲಾಗದ ಪ್ರಕ್ರಿಯೆಯಾಗಿದೆ. ಬ್ರಿಕ್ಸ್ ಸದಸ್ಯರ ಮೇಲೆ ಪಾಶ್ಚಿಮಾತ್ಯರು ವಿಧಿಸುವ ನಿರ್ಬಂಧಗಳು ಜಾಗತಿಕ ಬಿಕ್ಕಟ್ಟನ್ನು ಪ್ರಚೋದಿಸಬಹುದು' ಎಂದರು.

ರಶ್ಯದ ಕಝಾನ್ ನಗರದಲ್ಲಿ ಆರಂಭಗೊಂಡಿರುವ ಶೃಂಗಸಭೆಯಲ್ಲಿ ಸುಮಾರು 20 ಜಾಗತಿಕ ಮುಖಂಡರು ಪಾಲ್ಗೊಂಡಿದ್ದು 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣಕ್ಕೆ ಪುಟಿನ್ ಆದೇಶಿಸಿದ ಬಳಿಕ ರಶ್ಯದಲ್ಲಿ ನಡೆದ ಬೃಹತ್ ರಾಜತಾಂತ್ರಿಕ ಕಾರ್ಯಕ್ರಮವಾಗಿದೆ. 2009ರಲ್ಲಿ 4 ಸದಸ್ಯರೊಂದಿಗೆ (ಬ್ರೆಝಿಲ್, ರಶ್ಯ, ಭಾರತ ಮತ್ತು ಚೀನಾ) ಆರಂಭಗೊಂಡಿದ್ದ ಬ್ರಿಕ್ಸ್ ಆ ಬಳಿಕ ವಿಸ್ತರಣೆಗೊಂಡಿದ್ದು ದಕ್ಷಿಣ ಆಫ್ರಿಕಾ, ಈಜಿಪ್ಟ್ ಮತ್ತು ಇರಾನ್‍ನಂತಹ ಅಭಿವೃದ್ಧಿಶೀಲ ದೇಶಗಳು ಸದಸ್ಯರಾಗಿವೆ.

ಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ `ಉಕ್ರೇನ್‍ನಲ್ಲಿ ಹೋರಾಟ ಉಲ್ಬಣಗೊಳ್ಳಬಾರದು' ಎಂದರು. `ಯುದ್ಧವು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಬಾರದು, ಹೋರಾಟದ ಉಲ್ಬಣವಿಲ್ಲ ಮತ್ತು ಸಂಬಂಧಿಸಿದ ಪಕ್ಷಗಳು ಬೆಂಕಿಗೆ ತುಪ್ಪ ಸುರಿಯುವುದಿಲ್ಲ' ಎಂಬ ಮೂರು ಸಿದ್ಧಾಂತಗಳಿಗೆ ನಾವು ಬದ್ಧರಾಗಿರಬೇಕು. ಇದು ಆದಷ್ಟು ಬೇಗ ಪರಿಸ್ಥಿತಿಯನ್ನು ಸುಧಾರಿಸಲಿದೆ. ಗಾಝಾದಲ್ಲಿಯೂ ಸಾಧ್ಯವಾದಷ್ಟು ಬೇಗ ಕದನ ವಿರಾಮ ಜಾರಿಗೊಳ್ಳಲು ಪ್ರಯತ್ನಿಸಬೇಕು ' ಎಂದು ಕ್ಸಿಜಿಂಪಿಂಗ್ ಹೇಳಿದ್ದಾರೆ.

ಗಾಝಾ ಮತ್ತು ಲೆಬನಾನ್‍ನಲ್ಲಿ ಯುದ್ಧವನ್ನು ಅಂತ್ಯಗೊಳಿಸಲು ಬ್ರಿಕ್ಸ್ ಸದಸ್ಯರು ತಮ್ಮ ಎಲ್ಲಾ ಸಾಮೂಹಿಕ ಮತ್ತು ವೈಯಕ್ತಿಕ ಸಾಮರ್ಥ್ಯಗಳನ್ನು ಬಳಸಬೇಕು ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಆಗ್ರಹಿಸಿದರು. `ಈಗ ನಾವು ಎದುರಿಸುತ್ತಿರುವ ಎರಡು ಯುದ್ಧಗಳು ಜಾಗತಿಕ ಮಟ್ಟಕ್ಕೆ ಹರಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಸಾಮಾನ್ಯ ಗುರಿಗಳ ಕಡೆಗೆ ಒಟ್ಟಾಗಿ ಕೆಲಸ ಮಾಡುವ ನಮ್ಮ ಸಾಮರ್ಥ್ಯವನ್ನು ಪುನಸ್ಥಾಪಿಸುವುದು ಅತ್ಯಗತ್ಯ' ಎಂದು ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಡ'ಸಿಲ್ವಾ ಹೇಳಿದರು.

ಮೂರು ದಿನ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ 20 ಪ್ರಮುಖ ಮುಖಂಡರ ಸಹಿತ 36 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿರುವುದು ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯವನ್ನು ಒಬ್ಬಂಟಿಯಾಗಿಸುವ ಅಮೆರಿಕ ನೇತೃತ್ವದ ಪ್ರಯತ್ನಗಳ ವೈಫಲ್ಯ ಎಂದು ವಿಶ್ಲೇಷಿಸಲಾಗಿದೆ. ಜಾಗತಿಕ ಬ್ಯಾಂಕ್ ಪಾವತಿ ನೆಟ್‍ವರ್ಕ್ `ಸ್ವಿಫ್ಟ್'ಗೆ ಪರ್ಯಾಯವಾಗಿ ಹೊಸ ಪಾವತಿ ವ್ಯವಸ್ಥೆಯನ್ನು ಆರಂಭಿಸಲು ರಶ್ಯ ಆಗ್ರಹಿಸುತ್ತಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಗುರುವಾರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿ-7ರಂತಹ ಪಾಶ್ಚಿಮಾತ್ಯ ನೇತೃತ್ವದ ಅಂತರಾಷ್ಟ್ರೀಯ ಸಂಘಟನೆಗೆ ಪರ್ಯಾಯವಾಗಿ `ಬ್ರಿಕ್ಸ್' ಅನ್ನು ರಶ್ಯ ಉತ್ತೇಜಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News