ಅಮೆರಿಕದಲ್ಲಿ ಸುಂಟರಗಾಳಿ, ಧೂಳಿನ ಚಂಡಮಾರುತದ ಅಬ್ಬರ; ಕನಿಷ್ಠ 34 ಮಂದಿ ಸಾವು, ಹಲವರು ನಾಪತ್ತೆ

PC : NDTV
ವಾಷಿಂಗ್ಟನ್: ಸುಂಟರಗಾಳಿ ಹಾಗೂ ಚಂಡಮಾರುತದ ಅಬ್ಬರಕ್ಕೆ ಮಧ್ಯ ಅಮೆರಿಕದ ರಾಜ್ಯಗಳು ತತ್ತರಿಸಿದ್ದು ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ. 29 ಮಂದಿ ಗಾಯಗೊಂಡಿದ್ದು ಹಲವರು ನಾಪತ್ತೆಯಾಗಿದ್ದಾರೆ ಮತ್ತು ವ್ಯಾಪಕ ನಾಶ-ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆಯ ಛಾವಣಿಗಳು ಹಾರಿಹೋಗಿರುವುದು ಹಾಗೂ ಬೃಹತ್ ಟ್ರಕ್‍ಗಳು ಮಗುಚಿ ಬಿದ್ದಿರುವ ವೀಡಿಯೊಗಳನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಮುಂದಿನ ವಾರವೂ ಸುಂಟರಗಾಳ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನ್ಸಾಸ್ ರಾಜ್ಯದ ಹೆದ್ದಾರಿಯಲ್ಲಿ ತೀವ್ರ ಧೂಳಿನ ಚಂಡಮಾರುತದ ಕಾರಣ ಕಡಿಮೆ ಗೋಚರತೆಯಿಂದ 50ಕ್ಕೂ ಅಧಿಕ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಮಿಸ್ಸೌರಿ ರಾಜ್ಯದಲ್ಲಿಯೂ ಧೂಳಿನ ಚಂಡಮಾರುತವು 12 ಮಂದಿಯ ಸಾವಿಗೆ ಕಾರಣವಾಗಿದೆ. ಸಮುದ್ರ ತೀರದಲ್ಲಿ ನಿಲ್ಲಿಸಿದ್ದ ದೋಣಿಗಳು ಗಾಳಿಯ ಹೊಡೆತಕ್ಕೆ ಸಿಲುಕಿ ಒಂದರ ಮೇಲೊಂದು ಹಾರಿನಿಂತಿದ್ದು ವ್ಯಾಪಕ ನಷ್ಟ ಸಂಭವಿಸಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು ಕಟ್ಟಡಗಳಿಗೆ ಹಾನಿಯಾಗಿದೆ. ಹಲವು ಪ್ರದೇಶಗಳು ಸುಂಟರಗಾಳಿ, ಆಲಿಕಲ್ಲು ಮಳೆಯಿಂದ ತತ್ತರಿಸಿವೆ.
ಮಿಸ್ಸೌರಿಯ ವೇಯ್ನ್ ನಗರದಲ್ಲಿ 6 ಮಂದಿ, ಒಝಾರ್ಕ್ ನಗರದಲ್ಲಿ ಮೂರು, ಬಟ್ಲರ್, ಜೆಫರ್ಸನ್ ಮತ್ತು ಸೈಂಟ್ ಲೂಯಿಸ್ ನಗರಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಧೂಳಿನ ಬಿರುಗಾಳಿಯಿಂದಾಗಿ ವಾಹನ ಚಾಲಕರಿಗೆ ಸಮಸ್ಯೆಯಾಗಿದ್ದು ಟೆಕ್ಸಾಸ್‍ನಲ್ಲಿ ಹೆದ್ದಾರಿ ಅಪಘಾತದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಅರ್ಕಾನ್ಸಾಸ್ ರಾಜ್ಯದಲ್ಲಿ ಮೂವರು ಮೃತಪಟ್ಟಿದ್ದು ಇತರ 29 ಮಂದಿ ಗಾಯಗೊಂಡಿದ್ದಾರೆ. ಸುಂಟರಗಾಳಿಯ ಅಬ್ಬರ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗವರ್ನರ್ ಸಾರಾ ಸ್ಯಾಂಡರ್ಸ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಈ ಮಧ್ಯೆ, ಸುಂಟರಗಾಳಿಯಿಂದಾಗಿ ದಕ್ಷಿಣ ಅಮೆರಿಕದಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದಿದ್ದ ಕಾಡ್ಗಿಚ್ಚು ಮತ್ತೆ ತೀವ್ರಗೊಂಡಿದ್ದು ಓಕ್ಲಹೊಮ ನಗರದಲ್ಲಿ ಸುಮಾರು 300 ಮನೆಗಳಿಗೆ ಹಾನಿಯಾಗಿದೆ. ಸುಮಾರು 689 ಚದರ ಕಿ.ಮೀ ಭೂಪ್ರದೇಶ ಕಾಡ್ಗಿಚ್ಚಿನಿಂದ ಸುಟ್ಟುಹೋಗಿದ್ದು ಸ್ಥಳೀಯರನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಗವರ್ನರ್ ಕೆವಿನ್ ಸ್ಟಿಟ್ ಹೇಳಿದ್ದಾರೆ.