ಹೌದಿಗಳ ವಿರುದ್ಧ ಟ್ರಂಪ್ ಬ್ರಹ್ಮಾಸ್ತ್ರ ; ಯೆಮನ್ ಮೇಲೆ ಅಮೆರಿಕದಿಂದ ವಾಯುದಾಳಿ

Photo : x/@elly_bar
ಸನಾ: ಹೌದಿಗಳು ಹಡಗುಗಳ ಮೇಲಿನ ದಾಳಿಯನ್ನು ನಿಲ್ಲಿಸುವವರೆಗೆ ತೀವ್ರ ಬಲ ಪ್ರಯೋಗ ಮಾಡುವುದಾಗಿ ಟ್ರಂಪ್ ಹೇಳುತ್ತಿದ್ದಂತೆ ಅಮೆರಿಕವು ಯೆಮನ್ ಮೇಲೆ ದಾಳಿ ಮಾಡಿದೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯೆಮೆನ್ ರಾಜಧಾನಿ ಸನಾ ಮೇಲೆ ಶನಿವಾರ ಸರಣಿ ವಾಯುದಾಳಿಗಳಿಗೆ ಆದೇಶಿಸಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇರಾನ್ ಬೆಂಬಲಿತ ಹೌದಿ ಬಂಡುಕೋರರು ಪ್ರಮುಖ ಕಡಲ ಮಾರ್ಗಗಳಲ್ಲಿ ಹಡಗುಗಳ ಮೇಲಿನ ದಾಳಿಯನ್ನು ನಿಲ್ಲಿಸುವವರೆಗೆ ಅವರ ಮೇಲೆ ದಾಳಿ ನಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದರು.
ಯೆಮೆನ್‌ನಲ್ಲಿರುವ ಹೌದಿಗಳ ವಿರುದ್ಧ ನಿರ್ಣಾಯಕ ಮತ್ತು ಶಕ್ತಿಯುತ ಮಿಲಿಟರಿ ಕ್ರಮ ಕೈಗೊಳ್ಳುವಂತೆ ನಾನು ಅಮೆರಿಕ ಮಿಲಿಟರಿಗೆ ಆದೇಶಿಸಿದ್ದೇನೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ ಬಳಿಕ ಈ ಘಟನೆ ವರದಿಯಾಗಿದೆ.
ತಮ್ಮ ಪೋಸ್ಟ್ ನಲ್ಲಿ ಟ್ರಂಪ್, ಯೆಮೆನ್‌ನಲ್ಲಿರುವ ಹೌದಿಗಳ ವಿರುದ್ಧ ನಿರ್ಣಾಯಕ ಮತ್ತು ಶಕ್ತಿಯುತ ಮಿಲಿಟರಿ ಕ್ರಮ ಕೈಗೊಳ್ಳುವಂತೆ ನಾನು ಅಮೆರಿಕ ಸೇನೆಗೆ ಆದೇಶಿಸಿದ್ದೇನೆ. ಹೌದಿಗಳು ಅಮೆರಿಕದ ಮತ್ತು ಇತರ ದೇಶದ ಹಡಗುಗಳು, ವಿಮಾನಗಳು ಮತ್ತು ಡ್ರೋನ್‌ಗಳ ವಿರುದ್ಧ ಕಡಲ್ಗಳ್ಳತನ ಸೇರಿದಂತೆ ನಿರಂತರ ದಾಳಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಅಂದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಪ್ರತಿಕ್ರಿಯೆ ದುರ್ಬಲವಾಗಿತ್ತು. ಆದ್ದರಿಂದ ಹೌದಿಗಳು ಪ್ರಾಬಲ್ಯ ಮೆರೆದಿದ್ದರು. ಅಮೆರಿಕ ಧ್ವಜವಿರುವ ವಾಣಿಜ್ಯ ಹಡಗು ಸೂಯೆಜ್ ಕಾಲುವೆ, ಕೆಂಪು ಸಮುದ್ರ ಅಥವಾ ಏಡೆನ್ ಕೊಲ್ಲಿ ಮೂಲಕ ಸುರಕ್ಷಿತವಾಗಿ ಸಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ನಾಲ್ಕು ತಿಂಗಳ ಹಿಂದೆ ಕೆಂಪು ಸಮುದ್ರದ ಮೂಲಕ ಹೋದ ಕೊನೆಯ ಅಮೇರಿಕದ ಯುದ್ಧನೌಕೆಯ ಮೇಲೆ ಹೌದಿಗಳು ಹನ್ನೆರಡು ಬಾರಿ ದಾಳಿ ಮಾಡಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್‌ನಿಂದ ಆರ್ಥಿಕ ಸಹಾಯ ಪಡೆದಿರುವ ಹೌದಿಗಳು ಅಮೆರಿಕದ ವಿಮಾನಗಳ ಮೇಲೆ ಕ್ಷಿಪಣಿ ದಾಳಿಯನ್ನೂ ಮಾಡಿದ್ದಾರೆ. ಅವರು ನಮ್ಮ ರಕ್ಷಣಾ ಪಡೆಗಳು ಮತ್ತು ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ನಿರಂತರ ದಾಳಿಗಳಿಂದಾಗಿ ಅಮೆರಿಕ ಮತ್ತು ವಿಶ್ವ ಆರ್ಥಿಕತೆಯು ಹಲವು ಶತಕೋಟಿ ಡಾಲರ್‌ಗಳನ್ನು ಕಳೆದುಕೊಂಡಿವೆ. ಮುಗ್ಧ ಜೀವಗಳು ಅಪಾಯಕ್ಕೆ ಸಿಲುಕಿಸಿವೆ ಎಂದು ಟ್ರಂಪ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.