ಐಎಸ್ಎಸ್ ಪ್ರವೇಶಿಸಿದ ಸ್ಪೇಸ್ ಎಕ್ಸ್ ರಾಕೆಟ್: ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಭೂಮಿಗೆ ಮರಳಲು ಕ್ಷಣಗಣನೆ

Photo credit: PTI
ಹೊಸದಿಲ್ಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲಿ 9 ತಿಂಗಳ ಕಾಲ ಸಿಲುಕಿದ್ದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಶೀಘ್ರವೇ ಭೂಮಿಗೆ ಬಂದಿಳಿಯುವ ನಿರೀಕ್ಷೆಯಿದೆ.
ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಯೋಜನೆಯ ಭಾಗವಾಗಿ ಹೊಸ ಸಿಬ್ಬಂದಿಯನ್ನು ಹೊತ್ತ ಸ್ಪೇಸ್ ಎಕ್ಸ್ ರಾಕೆಟ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ವನ್ನು ಪ್ರವೇಶಿಸಿದೆ. ಕ್ರ್ಯೂ-10 ಮತ್ತು ಕ್ರ್ಯೂ-9 ನಡುವಿನ ಎರಡು ದಿನಗಳ ಹಸ್ತಾಂತರದ ನಂತರ ಮಾರ್ಚ್ 19ರಂದು ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಭೂಮಿಗೆ ಮರಳುವ ನಿರೀಕ್ಷೆಯಿದೆ.
ಕ್ರೂ ಡ್ರಾಗನ್ ಕ್ಯಾಪ್ಸೂಲನ್ನು ತುದಿಗೆ ಅಳವಡಿಸಲಾಗಿರುವ ಫಾಲ್ಕನ್ 9 ರಾಕೆಟ್, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಥಳೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 7.30ಕ್ಕೆ ಉಡಾವಣೆಗೊಂಡಿದೆ. ಭೂಕಕ್ಷೆಯ ಹೊರಠಾಣೆಗೆ ನಾಲ್ಕು ಮಂದಿಯ ತಂಡ ಪ್ರಯಾಣ ಬೆಳೆಸಿದೆ.
ನಾಸಾದ ಆ್ಯನ್ ಮೆಕ್ಲೀನ್ ಮತ್ತು ನಿಕೋಲ್ ಅಯೇರ್ಸ್, ಜಾಕ್ಸಾ ಗಗನಯಾನಿ ತಕುಯೊ ಒನಿಶಿ ಮತ್ತು ರೊಸ್ಕೋಸ್ಮಸ್ ನ ಕಿರಿಲ್ ಪೆಸ್ಕೋವ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದತ್ತ ಪ್ರಯಾಣ ಬೆಳೆಸಿದ್ದು, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಇತರ ಇಬ್ಬರನ್ನು ವಾಪಾಸು ಭೂಮಿಗೆ ಕಳುಹಿಸಲಿದ್ದಾರೆ.
2024ರ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಇವರು ಆ ಬಳಿಕ ಭೂಮಿಗೆ ಮರಳಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್‌ಲೈನರ್ ಭೂಮಿಗೆ ಮರಳಿತು.
ಇದಾದ ಬಳಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನ ಹಲವು ಬಾರಿ ನಡೆದಿದ್ದವು. ಆದರೆ, ಅದು ವಿಫಲವಾಗಿತ್ತು. ಇದೀಗ ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆಯು ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆ ತರುವ ನಿರೀಕ್ಷೆಯಿದೆ.