ಯೆಮನ್ ಮೇಲೆ ಮುಂದುವರಿದ ಅಮೆರಿಕದ ದಾಳಿ : ಕನಿಷ್ಠ 24 ಮಂದಿ ಮೃತ್ಯು

Photo | AP
ಸನಾ: ಯೆಮನ್ ರಾಜಧಾನಿ ಸನಾ ಮೇಲೆ ಹೌದಿಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ʼಯೆಮನ್‌ನಲ್ಲಿ ಕಟ್ಟಡವೊಂದರ ಕಾಂಪೌಂಡ್ ಅನ್ನು ನಾಶಪಡಿಸುವ ಚಿತ್ರಗಳನ್ನು ಹಂಚಿಕೊಂಡಿದೆʼ. ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು, ಶತ್ರುಗಳನ್ನು ತಡೆಯಲು ಮತ್ತು ಸ್ವಾತಂತ್ರ್ಯವನ್ನು ಮರು ಸ್ಥಾಪಿಸಲು ದಾಳಿ ನಡೆಸುವುದಾಗಿ ಅಮೆರಿಕ ಹೇಳಿಕೊಂಡಿದೆ.
ಟ್ರುಥ್ ಸೋಶಿಯಲ್ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೌದಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಹೌದಿ ಗುಂಪಿನೊಂದಿಗೆ ಸಂಬಂಧವನ್ನು ಕಡಿತಗೊಳಿಸುವಂತೆ ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ಯೆಮನ್‌ನಲ್ಲಿ ಹೌದಿಗಳ ವಿರುದ್ಧ ನಿರ್ಣಾಯಕ ಮತ್ತು ಶಕ್ತಿಯುತ ಮಿಲಿಟರಿ ಕ್ರಮವನ್ನು ಪ್ರಾರಂಭಿಸಲು ನಾನು ಅಮೆರಿಕದ ಮಿಲಿಟರಿಗೆ ಆದೇಶಿಸಿದ್ದೇನೆ ಎಂದು ಹೇಳಿದರು.
ಟ್ರಂಪ್ ಕಳೆದ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹೌದಿಗಳ ವಿರುದ್ಧ ಅಮೆರಿಕದ ನಡೆಸಿದ ಮೊದಲ ದಾಳಿ ಇದಾಗಿದೆ. ಹೌದಿಗಳು ಕೆಂಪು ಸಮುದ್ರದಲ್ಲಿ ಹಡಗು ಸಾಗಣೆಗೆ ಅಡ್ಡಿಪಡಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಿರುವುದಾಗಿ ಅಮೆರಿಕ ಹೇಳಿಕೊಂಡಿದೆ. ರಾಜಧಾನಿ ಸನಾ, ಉತ್ತರದ ಸಾದಾ ಪ್ರದೇಶ ಮತ್ತು ಹೌದಿಗಳು ನಿರ್ವಹಿಸುವ ಮಸೀರ್ಹ್ ಟಿವಿ ಮೇಲೆ ಈಗಾಗಲೇ ಅಮೆರಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.