ಹೌದಿಗಳ ಮೇಲೆ ಅಮೆರಿಕ ದಾಳಿ; 15 ಮಂದಿ ಬಂಡುಕೋರರು ಮೃತ್ಯು

PC: x.com/The_NewArab
ಸನಾ: ಯೆಮನ್ ರಾಜಧಾನಿ ಸನಾ ಮೇಲೆ ಹೌದಿ ಬಂಡುಕೋರರನ್ನು ಗುರಿ ಮಾಡಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ಮತ್ತಷ್ಟು ಮಾರಕ ಬಲಪ್ರಯೋಗ ಮಾಡುವುದಾಗಿ ಅಮೆರಿಕ ಬೆದರಿಕೆ ಹಾಕಿದೆ. ಅಮೆರಿಕದ ದಾಳಿಗೆ ವಿರುದ್ಧವಾಗಿ ಹೌದಿ ಬಂಡುಕೋರರು ಪ್ರತಿದಾಳಿಯ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ದಾಳಿಯಲ್ಲಿ ಮಕ್ಕಳೂ ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ಹೌದಿ ಬಂಡುಕೋರರು ವರದಿ ಮಾಡಿದ್ದಾರೆ. ಈ ಮೊದಲು ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ನೀಡಿದ ಹೇಳಿಕೆಯನ್ನು ಹೌದಿಯ ಅನ್ಸರೋಲ್ಹಾ ಮೀಡಿಯಾ ಪರಿಷ್ಕರಿಸಿದೆ. ರಾಜಧಾನಿ ಸನಾ ಮತ್ತು ಉತ್ತರದ ಸಾದಾ ಪ್ರದೇಶದ ಮೇಲೆ ದಾಳಿ ನಡೆದಿದೆ ಎಂದು ಸ್ಪಷ್ಟಪಡಿಸಿದೆ. ಟ್ರಂಪ್ ಕಳೆದ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹೌದಿಗಳ ವಿರುದ್ಧ ಅಮೆರಿಕದ ನಡೆಸಿದ ಮೊದಲ ದಾಳಿ ಇದಾಗಿದೆ. ಗಾಝಾ ಸಂಘರ್ಷದ ನಡುವೆಯೇ ಬಂಡುಕೋರರು ಇಸ್ರೇಲ್ ಹಾಗೂ ಕೆಂಪು ಸಮುದ್ರದ ಹಡಗುಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಈ ವಾಯುದಾಳಿ ನಡೆಸಿದೆ.
ಹೌದಿಗಳು ನಿರ್ವಹಿಸುವ ಮಸೀರ್ಹ್ ಟಿವಿ, ಸನಾ ಮೇಲಿನ ದಾಳಿಯನ್ನು ದೃಢಪಡಿಸಿದ್ದು, ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಏತನ್ಮ್ಯೆ ಹೌದಿಗಳ ಆರೋಗ್ಯ ಮತ್ತು ಪರಿಸರ ಸಚಿವಾಲಯ ಸಬಾ ಸುದ್ದಿ ಸಂಸ್ಥೆಯ ಮೂಲಕ ಹೇಳಿಕೆ ನೀಡಿ, "ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ಇತರ ಒಂಬತ್ತು ಮಂದಿ ತೀವ್ರ ಗಾಯಗೊಂಡಿದ್ದಾರೆ. ಈ ಪೈಕಿ ಬಹುತೇಕ ಮಂದಿಯ ಸ್ಥಿತಿ ಗಂಭೀರವಾಗಿದೆ" ಎಂದು ಸ್ಪಷ್ಟಪಡಿಸಿದೆ.
ದಾಳಿ ಬಗ್ಗೆ ಟ್ರುಥ್ ಸೋಶಿಯಲ್ ನಲ್ಲಿ ಹೇಳಿಕೆ ನೀಡಿರುವ ಟ್ರಂಪ್, "ನಮ್ಮ ಗುರಿಸಾಧನೆಯ ವರೆಗೆ ಮಾರಕ ಅಸ್ತ್ರಗಳ ಮಳೆಗೆರೆಯುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ. "ದಾಳಿಗೆ ಪ್ರತಿದಾಳಿ ನಡೆಸದೇ ಬಿಡುವುದಿಲ್ಲ" ಎಂದು ಹೌದಿಗಳು ಎಚ್ಚರಿಕೆ ನೀಡಿದ್ದಾರೆ. "ಈ ಅತಿಕ್ರಮಣ ಪ್ರತೀಕಾರದ ದಾಳಿ ಇಲ್ಲದೇ ಮುನ್ನಡೆಯದು. ನಮ್ಮ ಯೆಮನ್ ಪಡೆಗಳು ದಾಳಿಗೆ ದಾಳಿಯಿಂದಲೇ ಉತ್ತರಿಸಲು ಸರ್ವಸನ್ನದ್ಧವಾಗಿದೆ" ಎಂದು ಬಂಡುಕೋರರ ರಾಜಕೀಯ ಬ್ಯೂರೊ ಹೇಳಿಕೆ ನೀಡಿದೆ.