ಪಾಕಿಸ್ತಾನ: ಆತ್ಮಹತ್ಯಾ ಬಾಂಬ್ ದಾಳಿ ಪ್ರಯತ್ನ ವಿಫಲ; 10 ಉಗ್ರರ ಹತ್ಯೆ
ಪೇಷಾವರ: ದಕ್ಷಿಣ ಖೈಬರ್ ಪಖ್ತೂಂಕ್ವಾದ ಟ್ಯಾಂಕ್ ಜಿಲ್ಲೆಯ ಜಂದೋಲಾ ಕೋಟೆಯ ಬಳಿ ಚೆಕ್ ಪೋಸ್ಟ್ ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಪ್ರಯತ್ನವನ್ನು ಪಾಕಿಸ್ತಾನದ ಭದ್ರತಾ ಪಡೆಗಳು ವಿಫಲಗೊಳಿಸಿದ್ದು 10 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಚೆಕ್ ಪೋಸ್ಟ್ ನ ಬಳಿ ಒಬ್ಬ ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ಸ್ಫೋಟಿಸಿದಾಗ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಫೋಟ ನಡೆಸಿದ ಬಳಿಕ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು 10 ಉಗ್ರರನ್ನು ಹತ್ಯೆ ನಡೆಸಿದ್ದು ಮೃತ ಉಗ್ರರಲ್ಲಿ ಕೆಲವರು ಆತ್ಮಹತ್ಯಾ ಬಾಂಬರ್ ಗಳಾಗಿದ್ದು ಭಾರೀ ಪ್ರಮಾಣದಲ್ಲಿ ಬಾಂಬ್ ದಾಳಿಗೆ ಸಂಚು ಹೂಡಿದ್ದರು ಎಂದು ಭದ್ರತಾ ಪಡೆಯ ಮೂಲಗಳನ್ನು ಉಲ್ಲೇಖಿಸಿ `ಎಕ್ಸ್ ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಭದ್ರತಾ ಪಡೆಯ ದಾಳಿಯಲ್ಲಿ 10 ಉಗ್ರರು ಹತರಾಗಿರುವುದನ್ನು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ದೃಢಪಡಿಸಿದ್ದಾರೆ. ಮೃತ ಉಗ್ರರನ್ನು ಗುರುತಿಸುವ ಪ್ರಕ್ರಿಯೆ ಮುಂದುವರಿದಿದೆ. ಆತ್ಮಹತ್ಯಾ ಬಾಂಬ್ ದಾಳಿಯನ್ನು ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಕಾಬೂಲ್ ಫ್ರಂಟ್‍ಲೈನ್' ವರದಿ ಮಾಡಿದೆ.