ಅಸ್ಸಾದ್ ಯುದ್ಧಾಪರಾಧಗಳ ತನಿಖೆಗೆ ಸಿರಿಯಾ ಸಹಕಾರ : ವಿಶ್ವಸಂಸ್ಥೆ ತನಿಖಾ ತಂಡದ ಹೇಳಿಕೆ
ವಿಶ್ವಸಂಸ್ಥೆ : ಸಿರಿಯಾದ ಹೊಸ ಆಡಳಿತವು ಪದಚ್ಯುತ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ನಡೆಸಿರುವ ಯುದ್ಧಾಪರಾಧಗಳ ತನಿಖೆಯಲ್ಲಿ ಸಹಕರಿಸುವ ಬಗ್ಗೆ ಮುಕ್ತ ಮನಸ್ಸು ಹೊಂದಿದೆ ಎಂದು ಸಿರಿಯಾದಲ್ಲಿ ನಡೆದಿರುವ ಗಂಭೀರ ಅಪರಾಧ ಪ್ರಕರಣಗಳ ತನಿಖೆಗಾಗಿ ವಿಶ್ವಸಂಸ್ಥೆ ನೇಮಿಸಿರುವ ತಂಡ ಹೇಳಿದೆ.
`ಸಿರಿಯಾಕ್ಕಾಗಿ ಅಂತರಾಷ್ಟ್ರೀಯ, ನಿಷ್ಪಕ್ಷಪಾತ ಮತ್ತು ಸ್ವತಂತ್ರ ಕಾರ್ಯವಿಧಾನ'(ಐಐಐಎಂ) ತಂಡವು ಇತ್ತೀಚೆಗೆ ಸಿರಿಯಾ ರಾಜಧಾನಿ ದಮಾಸ್ಕಸ್‍ಗೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಹೊಸ ಆಡಳಿತವು ತನಿಖೆಗೆ ಸಂಪೂರ್ಣ ಸಹಕಾರ ನೀಡುವ ಬಗ್ಗೆ ಮುಕ್ತ ಮನಸ್ಸಿನಿಂದ ಸಮ್ಮತಿಸಿದೆ ಎಂದು ತಂಡದ ಮುಖ್ಯಸ್ಥ ರೋಬರ್ಟ್ ಪೆಟಿಟ್ ಹೇಳಿದ್ದಾರೆ.
2016ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಐಐಐಎಂ ರಚನೆಯಾಗಿತ್ತು. 2011ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ ಪ್ರಾರಂಭವಾದಂದಿನಿಂದ ಸಂಭವನೀಯ ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧಗಳಿಗೆ ಕಾರಣವಾದ ವ್ಯಕ್ತಿಗಳ ಸಾಕ್ಷ್ಯ ಸಂಗ್ರಹಣೆ ಮತ್ತು ಕಾನೂನು ಕ್ರಮಕ್ಕೆ ಸಹಾಯ ಮಾಡಲು ಈ ತಂಡವನ್ನು ರಚಿಸಲಾಗಿದೆ.
`ದಾಖಲೆ ಹಾಗೂ ಇತರ ಪುರಾವೆಗಳು ನಾಶಗೊಳ್ಳುವ ಮುನ್ನ ಅವನ್ನು ರಕ್ಷಿಸುವ ತುರ್ತು ಅಗತ್ಯವಿದೆ. ಅಸ್ಸಾದ್ ಆಡಳಿತದ ಪತನವು ನಮ್ಮ ಸಿರಿಯಾದಲ್ಲಿ ನಮ್ಮ ಕೆಲಸವನ್ನು ಪೂರ್ಣಗೊಳಿಸಲು ಒಂದು ಉತ್ತಮ ಅವಕಾಶವಾಗಿದೆ. ಸಮಯ ಮೀರುತ್ತಿದೆ. ಈ ದಾಖಲೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸುರಕ್ಷಿತವಾಗಿಡಲು ಒಂದು ಸಣ್ಣ ಅವಕಾಶವಿದೆ ' ಎಂದು ಪೆಟಿಟ್ ಹೇಳಿದ್ದಾರೆ.
ಅಸ್ಸಾದ್ ಆಡಳಿತವನ್ನು ಬಂಡುಕೋರರು ಪದಚ್ಯುತಗೊಳಿಸಿ, ಸಿರಿಯಾದ ಜೈಲುಗಳು ಹಾಗೂ ಬಂಧನ ಕೇಂದ್ರಗಳಲ್ಲಿ ಇದ್ದವರನ್ನು ಸ್ವತಂತ್ರಗೊಳಿಸಿದ್ದರು. ಇದರ ಬೆನ್ನಲ್ಲೇ ಅಸ್ಸಾದ್ ಆಡಳಿತದ ಸಂದರ್ಭ ನಡೆದ ದೌರ್ಜನ್ಯ ಹಾಗೂ ಹತ್ಯೆಗಳಿಗೆ ಹೊಣೆಗಾರರನ್ನು ಗುರುತಿಸಿ ಶಿಕ್ಷಿಸಬೇಕೆಂಬ ಆಗ್ರಹ ಹೆಚ್ಚಿದೆ.
ಸಿರಿಯಾ ನೆಲದಲ್ಲಿ ತನ್ನ ಕೆಲಸವನ್ನು ನಡೆಸಲು ಅಧಿಕಾರ ದೊರೆತ ತಕ್ಷಣ ತನಿಖಾ ತಂಡವು ಆದಷ್ಟು ಬೇಗ ಕಾರ್ಯಾಚರಣೆಯ ನಿಯೋಜನೆಗೆ ಸಿದ್ಧತೆ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯ ಸಹಾಯಕ ವಕ್ತಾರ ಸ್ಟೀಫನ್ ಟ್ರೆಂಬ್ಲೆ ಹೇಳಿದ್ದಾರೆ.
ನಮಗೆ ಅಧಿಕಾರ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಸಿದ್ಧತೆ ನಡೆಸುತ್ತಿದ್ದೇವೆ. ತನಿಖೆಯಲ್ಲಿ ಸಹಕರಿಸಬೇಕೆಂಬ ನಮ್ಮ ಕೋರಿಕೆಗೆ ಮಧ್ಯಂತರ ಆಡಳಿತದ ಪ್ರತಿನಿಧಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಮತ್ತು ತನಿಖಾ ತಂಡದ ಎದುರು ಇರುವ ಕಾರ್ಯದ ಅಗಾಧತೆಯ ಬಗ್ಗೆ ಅವರಿಗೆ ಅರಿವಿದೆ. ಹೊಸದಾಗಿ ಸಂಗ್ರಹಿಸುವ ದಾಖಲೆಗಳನ್ನು ಸಂರಕ್ಷಿಸುವಲ್ಲಿ ಪರಿಣತರ ಸಹಾಯದ ಅಗತ್ಯವಿದೆ ಎಂಬುದನ್ನು ಅವರು ಅರಿತಿದ್ದಾರೆ' ಎಂದು ಐಐಐಎಂ ತಂಡದ ಜತೆ ಸಿರಿಯಾಕ್ಕೆ ಭೇಟಿ ನೀಡಿರುವ ಸ್ಟೀಫನ್ ಟ್ರೆಂಬ್ಲೆ ಹೇಳಿದ್ದಾರೆ.
ಸಿರಿಯಾದಲ್ಲಿ ಹಲವು ಸ್ಥಳಗಳನ್ನು ಹಾಗೂ ಹಲವು ಅಧಿಕಾರಿಗಳನ್ನು ತಂಡ ಭೇಟಿಯಾಗಿದೆ. ಅಸ್ಸಾದ್ ಆಡಳಿತದ ದೌರ್ಜನ್ಯ ಅಪರಾಧಗಳನ್ನು ವ್ಯವಸ್ಥಿತಗೊಳಿಸುವ ಸರ್ಕಾರಿ ದಾಖಲೆಗಳು ಬೆಳಕಿಗೆ ಬಂದಿವೆ. ನಡೆದಿರುವ ಅಪರಾಧಗಳ ಪುರಾವೆಗಳನ್ನು ಸಂರಕ್ಷಿಸಲು, ನಕಲು ಮಾಡುವುದನ್ನು ತಪ್ಪಿಸಲು ಮತ್ತು ನ್ಯಾಯದ ಅನ್ವೇಷಣೆಯಲ್ಲಿ ಎಲ್ಲಾ ಬಲಿಪಶುಗಳ ಒಳಗೊಳ್ಳುವಿಕೆಯನ್ನು ಖಚಿತ ಪಡಿಸಿಕೊಳ್ಳಬೇಕು. ಇದಕ್ಕೆ ಸಿರಿಯನ್ನರು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಪಾಲುದಾರರ ಸಾಮೂಹಿಕ ಪ್ರಯತ್ನವು ಅತೀ ಅಗತ್ಯವಾಗಿದೆ ಎಂದು ಪೆಟಿಟ್ ಹೇಳಿದ್ದಾರೆ.
2023ರ ಜೂನ್‍ನಲ್ಲಿ 193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯ ಸಭೆಯು, ಸಿರಿಯಾದಲ್ಲಿ ಸಂಘರ್ಷದ ಕಾರಣ ನಾಪತ್ತೆಯಾಗಿರುವ 1,30,000ಕ್ಕೂ ಅಧಿಕ ಜನರು ಎಲ್ಲಿದ್ದಾರೆ ಮತ್ತು ಅವರ ಭವಿಷ್ಯದ ಬಗ್ಗೆ ಸ್ಪಷ್ಟಪಡಿಸುವ ಉದ್ದೇಶದಿಂದ `ಸಿರಿಯಾದಲ್ಲಿ ಕಾಣೆಯಾದ ವ್ಯಕ್ತಿಗಳ ಸ್ವತಂತ್ರ ಸಂಸ್ಥೆ'ಯನ್ನೂ ಸ್ಥಾಪಿಸಿದೆ.
► ಅಸ್ಸಾದ್ ಪತನ | 25,000 ಸಿರಿಯನ್ನರ ವಾಪಸಾತಿ
ಸಿರಿಯಾದಲ್ಲಿ ಬಶರ್ ಅಲ್ ಅಸ್ಸಾದ್ ಆಡಳಿತ ಪತನಗೊಂಡ ಬಳಿಕ 25,000ಕ್ಕೂ ಅಧಿಕ ಸಿರಿಯನ್ನರು ಸ್ವದೇಶಕ್ಕೆ ವಾಪಸಾಗಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವ ಆಲಿ ಯೆರ್ಲಿಕಾಯ ಮಂಗಳವಾರ ಹೇಳಿದ್ದಾರೆ.
2011ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ ಭುಗಿಲೆದ್ದಂದಿನಿಂದ ಸಿರಿಯಾದಿಂದ 3 ಲಕ್ಷಕ್ಕೂ ಅಧಿಕ ಮಂದಿ ಟರ್ಕಿಗೆ ಪಲಾಯನ ಮಾಡಿದ್ದಾರೆ ಎಂದು ಟರ್ಕಿ ಸರಕಾರ ಹೇಳಿದೆ. ಕಳೆದ 15 ದಿನಗಳಿಂದ ಸಿರಿಯಾಕ್ಕೆ ಹಿಂತಿರುಗುವ ಜನರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದ್ದು 25 ಸಾವಿರಕ್ಕೂ ಅಧಿಕ ಸಿರಿಯನ್ನರು ಸ್ವದೇಶಕ್ಕೆ ವಾಪಸಾಗಿದ್ದಾರೆ.
ಟರ್ಕಿಯಲ್ಲಿರುವ ಸಿರಿಯನ್ನರು ಸ್ವ ಇಚ್ಛೆಯಿಂದ ಸ್ವದೇಶಕ್ಕೆ ಹಿಂತಿರುಗುವ ಬಗ್ಗೆ ಈಗ ಗಮನ ನೀಡಲಾಗುತ್ತಿದೆ ಮತ್ತು ಈ ಬಗ್ಗೆ ಸಿರಿಯಾದ ಆಡಳಿತದ ಜತೆ ಸಂಪರ್ಕದಲ್ಲಿದ್ದೇವೆ. ಸ್ವದೇಶಕ್ಕೆ ಹಿಂತಿರುಗುವ ಸಿರಿಯನ್ನರ ದಾಖಲೆಯನ್ನು ನಿರ್ವಹಿಸಲು ದಮಾಸ್ಕಸ್ ನಲ್ಲಿರುವ ಟರ್ಕಿಯ ರಾಯಭಾರ ಕಚೇರಿ, ದಮಾಸ್ಕಸ್ ಮತ್ತು ಅಲೆಪ್ಪೋದಲ್ಲಿರುವ ಕಾನ್ಸುಲೇಟ್ ಕಚೇರಿಗಳಲ್ಲಿ ವಲಸೆ ಕಚೇರಿಯನ್ನು ಸ್ಥಾಪಿಸಲಾಗುವುದು ಎಂದವರು ಹೇಳಿದ್ದಾರೆ.