ಕಲಬುರಗಿ| ಮನೆಯ ಗಾರ್ಡನ್‍ಗೆ ನೀರು ಹಾಕಲು ವಿದ್ಯಾರ್ಥಿಗಳ ಬಳಕೆ ಆರೋಪ: ಪ್ರಾಂಶುಪಾಲೆ ವಿರುದ್ಧ ದೂರು

Update: 2024-01-14 15:30 GMT

ಕಲಬುರಗಿ: ಶಾಲೆಯ ವಿದ್ಯಾರ್ಥಿಗಳನ್ನು ಮನೆಯ ಗಾರ್ಡನ್‍ಗೆ ನೀರು ಹಾಕುವ ಕೆಲಸಕ್ಕೆ ಬಳಸಿಕೊಂಡ ಆರೋಪದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಇಂಗ್ಲಿಷ್ ಮಾದರಿ ಶಾಲೆಯಲ್ಲಿ ನಡೆದಿದ್ದು, ಈ ಕುರಿತು ಪ್ರಾಂಶುಪಾಲೆಯ ವಿರುದ್ಧ ಪೊಲೀಸ್ ಠಾಣೆಗೆ ಮಕ್ಕಳ ಫೋಷಕರು ದೂರು ನೀಡಿದ್ದಾರೆ.

ನಗರದ ಸೋನಿಯಾ ಗಾಂಧಿ ಆಶ್ರಯ ಕಾಲನಿಯಲ್ಲಿರುವ ಮೌಲಾನಾ ಆಜಾದ್ ಮೌಲಾನಾ ಆಜಾದ್ ಇಂಗ್ಲಿಷ್ ಮಾದರಿ ಶಾಲೆಯ ಪ್ರಾಂಶುಪಾಲೆ ಝಹೊರಾ ಜಬೀನ್ ಅವರು ಶಾಲೆಗೆ ಬಂದ 9ನೆ ತರಗತಿ ಕೆಲ ವಿದ್ಯಾರ್ಥಿಗಳಿಗೆ ತನ್ನ ಮನೆಯ ಗಾರ್ಡನ್ ಸೇರಿದಂತೆ ನೀರು ಹಾಕುವ ಕೆಲಸಕ್ಕೆ ಬಳಸಿಕೊಂಡಿದ್ದು ಅಲ್ಲದೆ, ಶಾಲೆಯ ಶೌಚಾಲಯದ ಸ್ವಚ್ಛತೆ ಮಾಡಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಶಾಲೆಯ ಶೌಚಾಲಯ ಸ್ವಚ್ಛತೆಗೆ ಮಕ್ಕಳ ಬಳಕೆಯ ಕುರಿತು ಝಹೋರಾ ಜಬೀನ್‍ರಿಗೆ ಪೋಷಕರು ಪ್ರಶ್ನಿಸಿದ್ದಾಗ ಶಾಲೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ತಮ್ಮ ಕೆಲಸ ತಾವು ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿ, ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆಂದು ಮಕ್ಕಳ ಪೋಷಕ ಮೊಹಮ್ಮದ್ ಜಮೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ರೋಜಾ ಪೊಲೀಸ್ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

‘ಮಕ್ಕಳನ್ನು ಗಾರ್ಡನ್‍ಗೆ ನೀರು ಹಾಕಲು ಬಳಸಿಕೊಂಡ ಸಂಬಂಧ ಪ್ರಾಂಶುಪಾಲೆ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಶಾಲೆಗೆ ಭೇಟಿ ಪರಿಶೀಲನೆ ನಡೆಸಿ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಕಳುಹಿಸಿದ್ದು, ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’

-ಜಾವಿದ್ ಕರಂಗಿ, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News