ಕಲಬುರಗಿ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ; ಕೈದಿಗಳ ವಿರುದ್ಧ ಎಫ್ಐಆರ್ ದಾಖಲು
ಕಲಬುರಗಿ: ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಖೈದಿಗಳ ರಾಜಾತಿಥ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಕೈದಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಜೈಲಿನಲ್ಲಿ ಕೈದಿಗಳು ಐಶಾರಾಮಿ ಜೀವನ ನಡೆಸುತ್ತಿರುವ ಫೋಟೋ,ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪಾ ಢಘೆ ಅವರು ಕೇಂದ್ರ ಕಾರಾಗೃಹದ ಮೇಲೆ ರಾತ್ರೋ ರಾತ್ರಿ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ಉಪ ಪೋಲಿಸ್ ಆಯುಕ್ತ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ 50ಕ್ಕೂ ಅಧಿಕಾರಿಗಳು ನಾಲ್ಕು ಗಂಟೆಗಳ ಕಾಲಕ್ಕೂ ಅಧಿಕವಾಗಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಪರಿಶೀಲನೆ ಕಾರ್ಯ ನಡೆಸಲಾಗಿದೆ. ಈ ವೇಳೆ ಕೈದಿಗಳ ಬಳಿ ಎರಡು ಮೊಬೈಲ್, ರಾಡ್, ಬೀಡಿ, ಗುಟ್ಕಾ, ಸಿಗರೇಟು ಪ್ಯಾಕೇಟ್ ಸಿಕ್ಕಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಗಾಂಜಾ ಸಿಕ್ಕಿಲ್ಲವೆಂದು ಮಾಹಿತಿ ನೀಡಿದರು.
ವಿಡಿಯೋ ಕಾಲ್ ಮೂಲಕ ಮಾತನಾಡಿರುವ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆಯಲಾಗಿದೆ. ವಿಚಾರಣಾಧೀನ ಕೈದಿಗಳಾದ ವಿನೋದ್, ಸಾಗರ್ ಮತ್ತು ಸೋನು ಎಂಬಾತನನ್ನು ವಿಚಾರಣೆ ನಡೆಸಲಾಗಿದೆ ಎಂದರು.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದ್ದಾರೆ.
ಕೈದಿಗಳ ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ಕಾರಾಗೃಹ ಎಡಿಜಿಪಿ ಮಾಲೀನಿ ಕೃಷ್ಣಮೂರ್ತಿ ಅವರು ದಿಢೀರ್ ನೆ ನಗರಕ್ಕೆ ಆಗಮಿಸಿದ್ದು, ಕಾರಾಗೃಹದ ಪರಿಶೀಲನೆ ನಡೆಸಲಿದ್ದಾರೆ.