ವಾಲ್ಮೀಕಿಯವರು ರಚಿಸಿರುವ ರಾಮಾಯಣ ಇಡೀ ಮನುಕುಲಕ್ಕೆ ಮಾದರಿ: ಯಲ್ಲಪ್ಪ ನಾಯ್ಕೋಡಿ

Update: 2024-10-17 13:43 GMT

ಕಲಬುರಗಿ: ರಾಮಾಯಣ ಬರೆದಿದ್ದು ವಾಲ್ಮೀಕಿಯವರು ಇಡೀ ಮನುಕುಲಕ್ಕೆ ಗೊತ್ತಿರುವ ವಿಷಯವಾಗಿದೆ. ಎಷ್ಟೇ ರಾಮಾಯಣ ಬರೆದರು ಮೂಲ ರಾಮಾಯಣ ಬದಲಾಯಿಸಲು ಸಾಧ್ಯವಿಲ್ಲ, ತ್ರೇತಾಯುಗದಲ್ಲಿ ಬರೆದಿರುವುದು ಈ ಒಂದು ಗ್ರಂಥ ಇತಿಹಾಸದಲ್ಲಿ ಉಲ್ಲೇಖವಿದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಡಾ. ಎಂ.ಎಂ ಪಂಡಿತ್ ರಂಗಮoದಿರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಪೂಜೆ ಸಲ್ಲಿಸಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬ ಮಹಾನ ಸಂದೇಶಗಳು ನೀತಿ ಪಾಠಗಳು  ರಾಮಾಯಣದಲ್ಲಿವೆ ವಾಲ್ಮೀಕಿಯವರು ಒಬ್ಬ ವಿಜ್ಞಾನಿ ಕೂಡ ಆಗಿದ್ದರು ತ್ತೇತಾಯುಗದಲ್ಲಿ ಪುಷ್ಪಕ ವಿಮಾನದ ಪರಿಕಲ್ಪನೆಯನ್ನು ನೀಡಿದ್ದಾರೆ. ರಾಜನಾದವನು ಹೇಗೆ ರಾಜ್ಯವನ್ನು ಆಳ್ವಿಕೆಮಾಡಬೇಕು ಪ್ರಜೆಗಳಿಗೆ ತಮ್ಮ ಮಕ್ಕಳಂತೆ  ಕಾಣಬೇಕು ಎಂದು ರಾಜನೀತಿ ತತ್ವಗಳನ್ನ ಹೇಳಿದ್ದಾರೆ ಎಂದರು.

ಸಂಸ್ಕೃತದಲ್ಲಿ ರಾಮಾಯಣ ಬರೆದಿದ್ದು ಒಂದು ಇತಿಹಾಸವಾಗಿದೆ. ಇದು ಇಡೀ ಮನುಕೂಲಕ್ಕೆ ಅನುಕೂಲವಾಗಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಮುಂದೆ ಬರಬೇಕು. ವಾಲ್ಮೀಕಿಯವರು ಒಂದು ಜಾತಿಗೆ ಸಿಮೀತವಾಗದೆ ಇಡೀ ವಿಶ್ವಕ್ಕೆ  ಸಿಮಿತರಾಗಿದ್ದರು ಎಂದು ಅವರು ತಿಳಿಸಿದರು. 

ಈ ವೇಳೆಯಲ್ಲಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ ಎಂ. ಗಾಜನೂರ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿಯ ಬಗೆಗಿನ ಅಧ್ಯಯನಗಳು ಮತ್ತು ಸ್ವರಚಿತ ರಾಮಾಯಣವನ್ನು ಆಧರಿಸಿ ನೋಡುವುದಾದರೆ ವಾಲ್ಮೀಕಿ ರಾಮನೆಂಬ ಪಾತ್ರವನ್ನು ಸಶಕ್ತವಾಗಿ ಕಟ್ಟಿದ ಭರತಖಂಡದ ಆದಿಕವಿ, ಬೇಡ ಸಮುದಾಯದ ಮೊದಲ ಸಾಕ್ಷರ, ಸಂಸ್ಕೃತವನ್ನು ಕೆಳಜಾತಿ ದಮನಿತ ಸಮುದಾಯಗಳಿಗೆ ನಿಶೇಧಿಸಿದ್ದ ಕಾಲಘಟ್ಟದಲ್ಲಿ ಸಂಸ್ಕೃತವನ್ನು ಕಲಿತು ಮೇರು ಕಾವ್ಯವನ್ನು ರಚನೆ ಮಾಡಿದ್ದು ಈ ಸಮುದಾಯಗಳಿಗೆ ಒಂದು ಸ್ಪೂರ್ತಿದಾಯಕ ಸಂಗತಿ ಎಂದರು.

ವಾಲ್ಮೀಕಿ ಬರೆದ ರಾಮಾಯಣದಲ್ಲಿ ನೈತಿಕತೆ ಪಾಠ ನೋಡಬಹುದಾಗಿದೆ. ನೈತಿಕತೆಯಿಂದ ಬದುಕುವ ಮನುಷ್ಯನಿಗೆ ಕಾಡಾಗಲಿ ನಾಡಾಗಲಿ ವ್ಯತ್ಯಾಸವಾಗುವುದಿಲ್ಲ ವಾಲ್ಮೀಕಿಯವರ ಮುಖಾಂತರ ರಾಮಯಣ ನೋಡಬೇಕಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ರಾಮಾಯಣದ ಇತಿಹಾಸಕ್ಕೆ ಒಂದು ಶಕ್ತಿಯನ್ನ ಕೊಟ್ಟವರು ಮಹರ್ಷಿ ವಾಲ್ಮೀಕಿಯವರಾಗಿದ್ದಾರೆ. ಕಲಬುರಗಿ ನಗರದಲ್ಲಿ ಮುಖ್ಯ ರಸ್ತೆಯಲ್ಲಿ ವಾಲ್ಮೀಕಿಯವರ ಒಂದು ಪುತ್ಥಳಿಯನ್ನ ನಿರ್ಮಾಣ ಮಾಡುತ್ತೇವೆ ಮತ್ತು ಅಧ್ಯಯನ ಪೀಠಕ್ಕೆ ಸರ್ಕಾರದಿಂದ 50 ಲಕ್ಷ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಲು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುತ್ತೇನೆ. ಹಾಗೆಯೇ ವಾಲ್ಮೀಕಿಯ ಒಂದು ಭವನವನ್ನು ನಿರ್ಮಾಣ ಮಾಡುವುದಾಗಿ ಅವರು ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿ ಪಾಟೀಲ, ಜಿಲ್ಲಾ ಸಮಾಜ ಕಲ್ಯಾಣ ಅಪರ ನಿರ್ದೇಶಕ ಎಂ.ಎಸ್. ಅಲ್ಲಾಭಕ್ಷ್ ಮತ್ತಿತರರು ಹಾಜರಿದ್ದರು.

ಇದಕ್ಕೂ ಮುನ್ನ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು. ಅದೇ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಅಡ್ಡೂರು, ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಸಮಾಜ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News