ಅಕ್ರಮ ಪಡಿತರ ಜೋಳ ಸಂಗ್ರಹಣೆ ಹಿನ್ನೆಲೆ : ಹೂವಿನಹಳ್ಳಿ ಎಫ್.ಪಿ.ಎಸ್ ಸಂಖ್ಯೆ-58ರ ಪರವಾನಿಗೆ ಅಮಾನತ್ತುಗೊಳಿಸಿ ಆದೇಶ
ಕಲಬುರಗಿ : ಪಡಿತರದಾರರಿಗೆ ವಿತರಿಸಲಾಗುವ ಜೋಳವನ್ನು ಅಕ್ರಮವಾಗಿ ಕೊಠಡಿಯಲ್ಲಿ ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಫಜಲ್ ಪುರ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ 58ರ (ಕಾರ್ಯದರ್ಶಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಹೂವಿನಹಳ್ಳಿ) ಲೈಸೆನ್ಸ್ ಸಂಖ್ಯೆ 1277/98ನ್ನು ಮುಂದಿನ ವಿಚಾರಣೆಗೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಲಬುರಗಿ ಉಪನಿರ್ದೇಶಕ ಭೀಮರಾಯ ಎಂ. ಆದೇಶ ಹೊರಡಿಸಿದ್ದಾರೆ.
ಅಕ್ರಮ ಜೋಳ ಸoಗ್ರಹಣೆ ಹಿನ್ನೆಲೆಯಲ್ಲಿ ಡೀಲರ್ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ದೇವಲ ಗಾಣಾಗಾಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ.0089/2024 ರಂತೆ ಡಿ.20 ರಂದು ಪ್ರಕರಣ ದಾಖಲಿಸಿರುವುದರಿಂದ, ಸದರಿ ಅಂಗಡಿ ವಿರುದ್ಧ ಕ್ರಮ ಕೈಗೊಂಡು ಪಡಿತರದಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಫಜಲ್ ಪುರ ತಹಶೀಲ್ದಾರ್ ಪ್ರಸ್ತಾವನೆ ಸಲ್ಲಿಸಿದರು.
ಎಫ್.ಪಿ.ಎಸ್ ಮೇಲಿನ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಡೀಲರ್ ಗೆ ನೋಟಿಸ್ ಜಾರಿಗೊಳಿಸಿ 24 ಗಂಟೆಯಲ್ಲಿ ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿದ್ದರು, ಯಾವುದೇ ಸಮಜಾಯಿಷಿ ಹೇಳಿಕೆ ನೀಡದ ಕಾರಣ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ-2016ರ ಕ್ಲಾಜ್ 12(1) ಮತ್ತು ತಿದ್ದುಪಡಿ ಆದೇಶ-2017ರ 2(ಇ) ರಂತೆ ಹೂವಿನಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ 58ರ ಪ್ರಾಧಿಕಾರ ಸಂಖ್ಯೆ : 1277/98 ನ್ನು ಅಮಾನತ್ತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಮಾನತ್ತು ಹಿನ್ನೆಲೆಯಲ್ಲಿ ಎಫ್.ಪಿ.ಎಸ್. 58ರ ಪಡಿತರದಾರರನ್ನು ಹತ್ತಿರದ ಸೂಕ್ತ ನ್ಯಾಯ ಬೆಲೆ ಅಂಗಡಿಗೆ ವರ್ಗಾಯಿಸಿ ಪಡಿತರ ಆಹಾರ ಧಾನ್ಯ ವಿತರಣಕ್ಕೆ ಕ್ರಮ ವಹಿಸಬೇಕೆಂದು ಅಫಜಲ್ ಪುರ ತಹಶೀಲ್ದಾರ್ ಅವರಿಗೆ ಆದೇಶದಲ್ಲಿ ತಿಳಿಸಲಾಗಿದೆ.