ಅಮಿತ್ ಶಾ ಹೇಳಿಕೆಯನ್ನು ಕಾಂಗ್ರೆಸ್ ತಿರುಚಿದೆ : ಡಾ.ಉಮೇಶ್ ಜಾಧವ್
ಕಲಬುರಗಿ : ರಾಜ್ಯಸಭೆಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಅಮಿತ್ ಶಾ ಅವರ ಮೊದಲ 11 ಸೆಕೆಂಡಿನ ಭಾಷಣದಲ್ಲಿ ಕಾಂಗ್ರೆಸ್ ತಿರುಚಿದ್ದು, ಪೂರ್ತಿ ಭಾಷಣದ ತುಣುಕು ನೋಡದೆ ಅದರ ಕುರಿತು ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿಯ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ನಮಗೆ ಅಭಿಮಾನವಿದೆ, ದಿನ ಬೆಳಗಾದರೆ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಕಾಂಗ್ರೆಸ್ ನಾಯಕರು, ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಅವರಿಗೆ ಅಗೌರವ ತೋರುತಿದ್ದಾರೆ. ಇದೇ ಕಾಂಗ್ರೆಸ್ ಪಕ್ಷದ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಅಂಬೇಡ್ಕರ್ ಅವರಿಗೆ ಅಂತ್ಯ ಸಂಸ್ಕಾರ ಮಾಡಲು ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಹಲವು ದಶಕಗಳ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷ 34 ವರ್ಷವಾದರೂ ಸಂಸದ ಭವನದಲ್ಲಿ ಬಾಬಾ ಸಾಹೇಬರ ಒಂದೇ ಒಂದು ಪೋಟೋ ಅಳವಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ :
ಈ ಭಾಗದ ಹಿರಿಯ ರಾಜಕೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದ್ದು, ಅವರು 2009ರಲ್ಲಿ ಸಂಸದರಾಗಿ ಆಯ್ಕೆಯಾದಾಗ ಮೊದಲ ಪಟ್ಟಿಯಲ್ಲಿ ಸಚಿವಸ್ಥಾನ ನೀಡಲಿಲ್ಲ. ಮುಖ್ಯಮಂತ್ರಿ ಸಹ ಮಾಡಲಿಲ್ಲ. ಈಗ ಕಾಂಗ್ರೆಸ್ ಮುಳುಗುವ ಹಡಗಾಗಿದ್ದರಿಂದ ಅವರಿಗೆ ಎಐಸಿಸಿ ಅಧ್ಯಕ್ಷರನ್ನಾಗಿಸುವ ಮೂಲಕ ಅವರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಆರೋಪಿಸಿದರು.
ಪ್ರಿಯಾಂಕ್ ಗಾಂಧಿ ಸ್ಪರ್ಧೆ ಮಾಡಿದ ಕೇರಳದ ವಯನಾಡ್ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಎಲ್ಲೋ ದೂರ ಕಿಡಕಿಯಲ್ಲಿ ಅಸಹಾಯಕನಂತೆ ಮಲ್ಲಿಕಾರ್ಜುನ್ ಖರ್ಗೆ ಅವರು ನಿಂತಿದ್ದು, ಇಡೀ ದೇಶದ ಜನರೇ ನೋಡಿದ್ದಾರೆ ಎಂದ ಅವರು, ಈ ಭಾಗದ ಹಿರಿಯ ನಾಯಕನನ್ನು ಕಾಂಗ್ರೆಸ್ ಕೇವಲ ಬಳಸಿಕೊಳ್ಳುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಶಶೀಲ್ ನಮೋಶಿ, ಬಿಜೆಪಿ ಗ್ರಾಮೀಣ ಮಂಡಲದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಅಂಬಾರಾಯ ಅಷ್ಟಗಿ, ನಿತೀನ ಗುತ್ತೇದಾರ್, ಹಣಮಂತರಾವ್ ಮಲಾಜಿ, ಧರ್ಮಣ್ಣ ಇಟಗಾ ಇತರರು ಇದ್ದರು.