ಮನುಸ್ಮೃತಿ ದಹನ ವಿಚಾರ ಉದಯಿಸಿದ್ದು ನಮ್ಮ ರಾಜ್ಯದಲ್ಲೇ: ಡಾ.ಅರುಣ ಜೋಳದಕೂಡ್ಲಗಿ

Update: 2024-12-27 05:35 GMT

ಕಲಬುರಗಿ: ಮನುಸ್ಮೃತಿ ಕೃತಿಯನ್ನು ದಹನ ಮಾಡಬೇಕೆಂಬ ವಿಚಾರ ಮೊದಲು ಹುಟ್ಟಿರುವುದೇ ಕರ್ನಾಟಕದಲ್ಲಿ ಎಂದು ಕಲಬುರಗಿ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಪ್ರಾಧ್ಯಾಪಕ, ಅಂಕಣಕಾರ ಡಾ.ಅರುಣ್ ಜೋಳದಕೂಡ್ಲಗಿ ಹೇಳಿದ್ದಾರೆ.

ನಗರದ ಕನ್ನಡ ಭವನದ ಸಭಾಭವನದಲ್ಲಿ ಸಂವಿಧಾನ ಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಸಂಜೆ ಆಯೋಜಿಸಿದ್ದ ಮನುಸ್ಮೃತಿ - ದುಷ್ಟಕೃತಿ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ 'ಮನುಸ್ಮೃತಿ ಕೃತಿ ದಹನ ಅಂದು-ಇಂದು ವಿಚಾರ ಸಂಕಿರಣ' ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ನಿಪ್ಪಾಣಿಯಲ್ಲಿ ನಡೆಯುವ ಸಮಾವೇಶದ ದಿನಗಳಲ್ಲಿಯೇ ಇನ್ನೊಂದೆಡೆ ಮನುವಾದಿಗಳು ಸಮಾವೇಶ ನಡೆಸಿ ತಾವು ಮನುಸ್ಮೃತಿ ಕೃತಿಯಂತೆ ನಡೆಯುತ್ತಿದ್ದೇವೆ ಎಂದು ಗಾಂಧೀಜಿಗೆ ಮನವೊಲಿಸುತ್ತಿದ್ದರು. ಇದೇ ಕಾರಣಕ್ಕಾಗಿಯೇ ಡಾ.ಬಿ.ಆರ್ ಅಂಬೇಡ್ಕರ್ ಅವರು 1925ರಲ್ಲಿ ನಿಪ್ಪಾಣಿಯಲ್ಲಿ ನಡೆದಿದ್ದ ಬಹಿಷ್ಕೃತ ಭಾರತ ಸಮಾವೇಶದಲ್ಲಿ ಮನುಸ್ಮೃತಿ ಕೃತಿಯನ್ನು ಸುಡಬೇಕು ಎಂದು ಆಕ್ರೋಶ ಭರಿತವಾಗಿ ಮಾತನಾಡಿದ್ದರು.

ಈ ಸಮಾವೇಶದಲ್ಲಿ ಮನುಷ್ಯನನ್ನು ಕೀಳಾಗಿ ಕಾಣುವ, ಹೆಣ್ಣುಮಕ್ಕಳಿಗೆ, ಕೆಳವರ್ಗದವರಿಗೆ ಹಕ್ಕುಗಳನ್ನು ನೀಡದ ಮನುಸ್ಮೃತಿಯನ್ನು ಸುಟ್ಟು ಹಾಕಬೇಕು ಎಂದು ಹೇಳಿದ್ದರು. ಈ ಹೊರಾಟವೇ ಮುಂಬೈ ಪ್ರಾಂತ್ಯದಲ್ಲಿ ಮೊದಲದ್ದಾಗಿತ್ತು ಎಂದು ಅರುಣ್ ಜೋಳದಕೂಡ್ಲಿಗಿ ತಿಳಿಸಿದರು.

ನಂತರ ಕೆಲ ವರ್ಷಗಳಲ್ಲಿ ಮುಂದೆ ಮಹಾಡ್ ಸತ್ಯಾಗ್ರಹ ನಡೆಯುತ್ತದೆ. ಇಲ್ಲಿ ಐದು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಇದರಲ್ಲಿ ಮೊದಲನೇ ನಿರ್ಣಯ ಮನುಸ್ಮೃತಿ ಕೃತಿಯನ್ನು ದಹನ ಮಾಡುವುದಾಗಿತ್ತು. ಇದೇ ನಿರ್ಣಯದಂತೆ 1927ರ ಡಿ.25ರಂದು ಶಾಸ್ತ್ರೋಕ್ತವಾಗಿ ಮನುಸ್ಮೃತಿಯನ್ನು ದಹನ ಮಾಲಾಗುತ್ತದೆ ಎಂದರು.

2027ಕ್ಕೆ ಮನಸ್ಮೃತಿ ದಹನ ಮಾಡಿ  ಶತಮಾನ ಪೂರೈಸಲಾಗುತ್ತದೆ. ನೂರು ವರ್ಷ ಕಳೆದರೂ ಈ ಮನಸ್ಮೃತಿ ಯನ್ನು ಮತ್ತೆ ಜಾರಿಗೆ ತರಲು ಮನುವಾದಿಗಳು ಪ್ರಯತ್ನ ಮಾಡುತ್ತಿದ್ದಾರೆ, ಕಾಲಕ್ಕೆ ತಕ್ಕಂತೆ ಅವರು ಡಿಜಿಟಲೀಕರಣ ಮೂಲಕ ಯುವಕರ ಭಾವನೆಗಳಲ್ಲಿ ಮನುವಾದ ಬಿತ್ತುತ್ತಿದ್ದಾರೆ, ಅದನ್ನು ನಾವು ನಿರ್ನಾಮಗೊಳಿಸಲು ಕಾಲಕ್ಕೆ ತಕ್ಕಂತೆ ಡಿಜಿಟಲೀಕರಣ ಆಗಬೇಕಾಗಿದೆ ಎಂದು ಡಾ.ಅರುಣ್ ಜೋಳದಕೂಡ್ಲಗಿ ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ಸನಾತನವಾದಿಗಳು ಹೆಚ್ಚಾಗಿ ಆರೆಸ್ಸೆಸ್, ಬಿಜೆಪಿಯವರು ಚಾತುರ್ವರ್ಣ ವ್ಯವಸ್ಥೆ ಖಾಯಂ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದಾರೆ. ಧರ್ಮ, ಜಾತಿ, ಸಂಸ್ಕೃತಿ ಎಂದು ಹೇಳಿ ದುಡಿಯುವ ವರ್ಗವನ್ನು ಗುರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂದಿನ ದಿನಗಳಲ್ಲಿ ದೊಡ್ಡ ಕಾರ್ಯಕ್ರಮಗಳು ಮಾಡುವ ಮೂಲಕ ನಮ್ಮ ಊರುಗಳಿಗೆ ಹೊಕ್ಕುತ್ತಿದ್ದಾರೆ, ಅವರು ನಮ್ಮೂರಿನ ದ್ವಾರ ಬಾಗಿಲು ಪ್ರವೇಶಿಸುವ ಮುನ್ನವೇ ನಾವು ಬಾಗಿಲನ್ನು ಮುಚ್ಚಬೇಕಾಗಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಮನುಸ್ಮೃತಿ ಶ್ಲೋಕಗಳನ್ನು ಒಬ್ಬೊಬ್ಬರು ಓದುತ್ತಾ ಅವುಗಳನ್ನು ದಹಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರ್ತಿ ಕೆ.ನೀಲಾ, ಶ್ಯಾಮ ನಾಟೀಕಾರ, ಶ್ರೀಶೈಲ ಘೋಳಿ, ಶ್ರೀಮಂತ್ ಬಿರೆದಾರ್, ಆರ್.ಕೆ ಹುಡಗಿ, ಸಲ್ಮಾನ್ ಖಾನ್, ಎಸ್ಎಫ್ ಐನ ಸುಜಾತಾ, ಡಿವೈಎಫ್ ಐನ ಲವಿತಾ ವಸ್ತ್ರದ್ ಸೇರಿದಂತೆ ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News