ಕಲಬುರಗಿ | ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಜನಾಕ್ರೋಶ ಪಾದಯಾತ್ರೆ ಆರಂಭ
ಕಲಬುರಗಿ : ಆಳಂದ ಕ್ಷೇತ್ರದ ಶಾಸಕರು ಭ್ರಷ್ಟಾಚಾರ ಹಾಗೂ ಪಕ್ಷಪಾತ ನಡೆಸಿದ್ದಾರೆ ಎಂದು ಆರೋಪಿಸಿ ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ಘಟಕವು ಗುರುವಾರ ಮಾದನಹಿಪ್ಪರಗಾದಿಂದ ಆಳಂದವರೆಗೆ ಎರಡು ದಿನದ ಜನಾಕ್ರೋಶ ಪಾದಯಾತ್ರೆಗೆ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಾಧವ ಅವರು, ರಾಜ್ಯ ಸರ್ಕಾರ ಬಾಳೆ ಹಣ್ಣಿನ ರಾಜಕೀಯ ಮಾಡುತ್ತಿದೆ. ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಕೈಗೊಳ್ಳಲಿರುವ ಜನಾಕ್ರೋಶ ಯಾತ್ರೆಯನ್ನು ಆಳಂದದಿಂದಲೇ ಹರ್ಷಾನಂದ ಗುತ್ತೇದಾರ ಕೈಗೊಂಡಿರುವ ಹೋರಾಟ ಮಾದರಿಯಾಗಲಿದೆ. ಕೇಂದ್ರ ಸರ್ಕಾರದ ಅನೇಕ ಜನಪರ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಜನ ಸಾಮಾನ್ಯರಿಗೆ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿರುವುದರ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಚಂದ್ರಶೇಖರ ಹಿರೇಮಠ, ಆನಂದ ಪಾಟೀಲ, ವೀರಣ್ಣಾ ಮಂಗಾಣೆ, ಆದಿನಾಥ ಹೀರಾ ಮಾತನಾಡಿರು.
ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಮಲ್ಲಿಕಾರ್ಜುನ ತಡಕಲ್, ಗೌರಿ ಚಿಚಗೋಟಿ, ಅಣ್ಣರಾವ್ ಕವಲಗಾ, ಹಣಮಂತರಾವ್ ಮಲಾಜಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಚಂದ್ರಕಾoತ ಭೂಸನೂರ, ಸಂತೋಷ ಹಾದಿಮನಿ, ಸುನೀಲ ಹಿರೋಳಿಕರ್, ಪ್ರಕಾಶ ಮಾನೆ, ಶಿವಪ್ಪ ಕೋಳಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪಾದಯಾತ್ರೆ ಶುಕ್ರವಾರ ಆಳಂದ ಪಟ್ಟಣಕ್ಕೆ ಆಗಮಿಸಿ ಬಸ್ ನಿಲ್ದಾಣ ಬಳಿ ಬೃಹತ್ ಸಭೆ ನಡೆಸಲಿದೆ. ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.