ಕಲಬುರಗಿ: ಓರಿಯಂಟ್ ಸಿಮೆಂಟ್ ಕಂಪೆನಿ ವಿರುದ್ಧ ಬಿಜೆಪಿ ಪ್ರತಿಭಟನೆ
ಕಲಬುರಗಿ: ಬಿಜೆಪಿ ಮುಖಂಡರ ಲಾರಿ ವಾಹನವನ್ನು ಓರಿಯಂಟ್ ಸಿಮೆಂಟ್ ಕಂಪನಿಯವರು ಲೋಡಿಂಗ್ ಮಾಡದೆ ವಿನಾಕಾರಣ ಕಿರುಕುಳ ನೀಡುತ್ತಿರುವ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚಿತ್ತಾಪುರ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರ ನೇತೃತ್ವದಲ್ಲಿ ಮುಖಂಡರು ಕಂಪೆನಿಗೆ ಹೋಗುವ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಕಂಪೆನಿ ಗೇಟ್ ಮುಂದೆ ಹೋರಾಟ ಮಾಡಲು ಹೊರಟ್ಟಿದ್ದ ಬಿಜೆಪಿ ಮುಖಂಡರನ್ನು ಪೆಟ್ರೋಲ್ ಬಂಕ್ ಹತ್ತಿರ ಪೊಲೀಸ್ ಅಧಿಕಾರಿಗಳು ತಡೆ ಹಿಡಿದರು. ಈ ಮಧ್ಯೆ ಮುಖಂಡರ ಹಾಗೂ ಪೊಲೀಸರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಆಗಮಿಸಿ, ಈ ಕುರಿತು ಒಂದು ವಾರ ಕಾಲಾವಕಾಶ ನೀಡಿ ತನಿಖೆ ಕೈಗೊಳ್ಳಲಾಗುವುದು ಎಂದು ಹೋರಾಟಗಾರರ ಮನವೊಲಿಸಿದರು. ನಂತರ ಮುಖಂಡರು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಎಮ್ಮೆನೂರ್, ಅಶ್ವಥ ರಾಠೋಡ, ದೀಪಕ್ ಹೊಸ್ಸೂರಕರ್, ಶಾಂತಕುಮಾರ ಮಳಖೇಡ, ಮಹ್ಮದ್ ಯುನೂಸ್, ಮಲ್ಲಿಕಾರ್ಜುನ ಅಲ್ಲೂರಕರ್, ಗೂಳಿ ಡಿಗ್ಗಿ ಸೇರಿದಂತೆ ಬಿಜೆಪಿ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.