ಮೃತ್ಯುಕೂಪಕ್ಕೆ ಆಹ್ವಾನಿಸುತ್ತಿರುವ ಡಿ.ಸಿ ಕಚೇರಿ ಪ್ರವೇಶದ್ವಾರ
ಕಲಬುರಗಿ: ಜಿಲ್ಲಾಡಳಿತ ಕಚೇರಿಯ ಎದುರಿನಲ್ಲಿ ತಲೆ ಎತ್ತಿರುವ ಮುಖ್ಯ ಪ್ರವೇಶದ್ವಾರದ ಮೇಲ್ಬಾಗದ ಕಟ್ಟಡ ಕುಸಿಯುವ ಭೀತಿಯಲ್ಲಿವೆ. ಸುಸಜ್ಜಿತ ಕಟ್ಟಡದಿಂದ ಗಮನ ಸೆಳೆಯುವ ಜಿಲ್ಲಾಡಳಿತದ ಕಚೇರಿಗೆ ಹೊರಗಿನ ಕಮಾನುಗಳು ಮೃತ್ಯು ಕೂಪಕ್ಕೆ ಆಹ್ವಾನಿಸುತ್ತಿವೆ.
ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್ ಗೆ ಹೋಗುವ ಮುಖ್ಯ ರಸ್ತೆಯಲ್ಲಿರುವ 'ಮಿನಿ ವಿಧಾನಸೌಧ' ಎಂದು ಕರೆಯಲ್ಪಡುವ ಜಿಲ್ಲಾಡಳಿತ ಕಚೇರಿಗೆ ದಿನನಿತ್ಯ ಸಾವಿರಾರು ಜನರು ಬರುತ್ತಾರೆ. ಅಲ್ಲದೇ ಇಲ್ಲಿ ಪ್ರತೀ ದಿನ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಈ ಪ್ರದೇಶವು ಯಾವಾಗಲೂ ಜನಜಂಗುಳಿಯಿಂದ ತುಂಬಿರುತ್ತದೆ. ಕಚೇರಿಯ ಒಳಗಡೆ, ಹೊರಗಡೆಯೂ ಜನರಿಂದ ಆವರಿಸಿರುತ್ತದೆ.
ಈ ಕಮಾನುಗಳ ಪಕ್ಕದಲ್ಲೇ ನಗರ ಬಸ್ ನಿಲ್ದಾಣವೂ ಇರುವುದರಿಂದ ಬಸ್, ಆಟೊ ಮತ್ತಿತರ ವಾಹನಗಳು ಸೇರಿದಂತೆ ಪ್ರಯಾಣಿಕರು ಸಹ ಇಲ್ಲೇ ಹೆಚ್ಚಾಗಿ ಕಾಣಿಸುತ್ತಾರೆ. ಇಂತಹ ಜನಭರಿತ ಪ್ರದೇಶವಾದ ಡಿ.ಸಿ ಕಚೇರಿಯ ಪ್ರವೇಶ ದ್ವಾರಗಳ ಮೇಲ್ಬಾಗದ ಕಮಾನುಗಳು ಕುಸಿಯುವ ಹಂತದಲ್ಲಿವೆ.
ಹಾಗಾಗಿ ಕಮಾನುಗಳ ಹೊರ, ಒಳಭಾಗದಲ್ಲಿ ನಿಲ್ಲುವುದಕ್ಕೆ ಸಾರ್ವಜನಿಕರು ಇದೀಗ ಭಯ ಪಡುತ್ತಿದ್ದಾರೆ. ನಿಝಾಮರ ಕಾಲದ ಪ್ರವೇಶ ದ್ವಾರ: ಈಗಿ ರುವ ಜಿಲ್ಲಾಡಳಿತ ಕಚೇರಿಯ ಹೊರಭಾಗದ ಪ್ರವೇಶ ದ್ವಾರಗಳು ನಿಝಾಮರ ಕಾಲದಲ್ಲಿ ಕಟ್ಟಿರುವ ಕಟ್ಟಡವಾಗಿದೆ. ಸುಮಾರು 150 ವರ್ಷಕ್ಕೂ ಹಳೆಯ ಕಟ್ಟಡವಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಆಗಿನ ಕಾಲದಲ್ಲಿ ನಿರ್ಮಿಸಿರುವ ಈ ಕಟ್ಟಡವು ಶಿಥಿಲಗೊಳ್ಳದೆ ಗಟ್ಟಿಯಾಗಿ ಇತ್ತು. ಹಾಗಾಗಿ ಅದನ್ನು ತೆರವುಗೊಳಿಸದೆ, ಕಟ್ಟಡವನ್ನು ಇಂದಿಗೂ ಕಾಪಾಡಿಕೊಂಡು ಬರಲಾಗಿದೆ.
ಆಕರ್ಷಕ ಕಮಾನುಗಳ ಮೂಲಕ ಗಮನ ಸೆಳೆಯುವ ಈ ಪುರಾತನ ಕಟ್ಟಡದ ಮೇಲ್ಬಾಗದಲ್ಲಿ ಗಿಡ, ಗಂಟಿ, ಹುಲ್ಲು ಬೆಳೆದಿರುವುದರಿಂದ ಅದಕ್ಕೆ ಅಡಕವಾಗಿ ನಿಂತಿರುವ ಕಲ್ಲುಗಳು ಉರುಳಿ ಬೀಳುವ ಸಂಭವದಲ್ಲಿವೆ. ಕುಸಿಯುವ ಭೀತಿಯಲ್ಲಿರುವುದರಿಂದ ಬೇಗನೆ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಡಿ.ಸಿ ಕಚೇರಿ ಮುಖ್ಯದ್ವಾರದ ಬಲಭಾಗ ಮತ್ತು ಎಡಭಾಗದ ಮೇಲಿನ ಕಲ್ಲುಗಳು ಯಾವಾಗ ಬೇಕಾದರೂ ಕುಸಿದು ಬೀಳಬಹುದು. ಹಾಗಾಗಿ ಅಲ್ಲಿಗೆ ಭೇಟಿ ನೀಡುವವರು ಜಾಗರೂಕರಾಗಿರಬೇಕಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಿತ ಅಧಿಕಾರಿಗಳು ಪುರಾತನ ಪ್ರವೇಶ ದ್ವಾರದ ತುರ್ತಾಗಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಡಾ.ರೆಹಮಾನ್ ಪಟೇಲ್, ಕಲಾವಿದ
ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಯುವ ವೇಳೆಯಲ್ಲೇ ಪ್ರವೇಶ ದ್ವಾರದ ಮೇಲೆ ಬೆಳೆದಿರುವ ಕಸ, ಕಡ್ಡಿಗಳನ್ನು ತೆಗೆದು ಶುಚಿಗೊಳಿಸಲಾಗಿ ದೆ. ಮತ್ತೆ ಕಸ ಬೆಳೆದಿದ್ದಲ್ಲಿ ಅದನ್ನು ಗಮನಿಸಿ, ಕಟ್ಟಡದ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
ಬಿ.ಫೌಝಿಯಾ ತರನ್ನುಮ್, ಜಿಲ್ಲಾಧಿಕಾರಿ
ಆಗಾಗ ಜಿಲ್ಲಾಡಳಿತ ಕಚೇರಿಗೆ ಬರುತ್ತಿರುತ್ತೇನೆ. ಕಮಾನುಗಳ ಮೇಲಿನ ಕಲ್ಲುಗಳು ಒಂದೇ ಕಡೆ ವಾಲಿವೆ. ಇಲ್ಲಿ ನಿಲ್ಲುವುದಕ್ಕೆ ಭಯವಾಗುತ್ತಿದೆ. ಅಧಿಕಾರಿಗಳು ಇದನ್ನು ಬೇಗನೆ ಸರಿಪಡಿಸಬೇಕು. –
ಪ್ರಶಾಂತ್ ಲೋಖಂಡೆ, ಸ್ಥಳೀಯರು