ಭಾರತದಲ್ಲೇ ಗಾಂಧೀಜಿಯ ಚಾರಿತ್ರ್ಯ ಹರಣ, ನೋವಿನ ಸಂಗತಿ : ಬಿ.ಆರ್.ಪಾಟೀಲ್

Update: 2024-10-27 17:08 GMT

ಕಲಬುರಗಿ : ಮಹಾತ್ಮ ಗಾಂಧೀಜಿ ಅವರನ್ನು ಜಗತ್ತಿನ ಇತರೆ ದೇಶಗಳು ಗೌರವಿಸಿ ಪೂಜಿಸುತ್ತಾರೆ. ಆದರೆ, ಸ್ವಂತ ದೇಶ ಭಾರತದಲ್ಲೇ ಗಾಂಧೀಜಿಯ ಚಾರಿತ್ರ್ಯ ಹರಣ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಡಾ.ಎಸ್. ಎಂ.ಪಂಡಿತ ರಂಗಮಂದಿರದಲ್ಲಿ ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣದ ವತಿಯಿಂದ ಆಯೋಜಿಸಿದ ಗಾಂಧಿ ಜಯಂತಿ ಪ್ರಯುಕ್ತ "ಬಾಪೂಜಿ'' ತೊಗಲು ಬೊಂಬೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಬಗ್ಗೆ ಗಾಂಧೀಜಿಗೆ ಸಾಕಷ್ಟು ಒಲವಿತ್ತು. ಬಸವಣ್ಣ ಹೇಳಿದ್ದನ್ನೇ ಗಾಂಧೀಜಿ ಅವರು ತಮ್ಮ ಅಹಿಂಸಾ ತತ್ವದ ಮೂಲಕ ಜಗತ್ತಿನ 186ಕ್ಕೂ ಹೆಚ್ಚಿನ ದೇಶಗಳಿಗೆ ಮಾದರಿಯಾಗಿದ್ದಾರೆ. ಗಾಂಧಿ ಕುರಿತು ಅನೇಕ ಲೇಖನ,ಕಾದಂಬರಿ, ಆತ್ಮಚರಿತೆ ಓದಿದ್ದೇವೆ. ಆದರೆ, ಗಾಂಧೀಜಿಯನ್ನು ಮೀರಿಸುವ ಎರಡನೇ ಶಕ್ತಿ ಇಂದಿಗೂ ಜಗತ್ತಿನಲ್ಲಿ ಹುಟ್ಟಿಲ್ಲ ಎಂದು ಹೇಳಿದರು.

ಕರ್ನಾಟಕದ ಬೆಳಗಾವಿಗೆ ಗಾಂಧೀಜಿ ಬಂದು ಕಾಂಗ್ರೆಸ್ ಅಧಿವೇಶನ ನಡೆಸಿ ಇಂದಿಗೆ 100 ವರ್ಷ ಸಂದಿವೆ. ಅದರ ಫಲವಾಗಿ ರಾಜ್ಯ ಸರಕಾರ ಗಾಂಧಿ ಜೀವನ, ಆದರ್ಶ ಎಲ್ಲಡೆ ಪ್ರಚಾರ ಪಡಿಸುವ ನಿಟ್ಟಿನಲ್ಲಿ ವರ್ಷಪೂರ್ತಿ ಅನೇಕ ಕಾರ್ಯಕ್ರಮ ಆಯೋಜನೆ ರೂಪಿಸಿದೆ. ನಾವೆಲ್ಲರೂ ಗಾಂಧಿ ಭಾರತ ಕಟ್ಟವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಗಾಂಧೀಜಿ ಅವರ ಜೀವನ ಸ್ಫೂರ್ತಿಯಾಗಬೇಕು. ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ಗ್ರಾಮೀಣ, ಹೋಬಳಿ ಮಟ್ಟಕ್ಕೂ ಕಲಬುರಗಿ ರಂಗಾಯಣ ತೆಗೆದುಕೊಂಡು ಹೋಗುತ್ತೇವೆ. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಅವರ ತತ್ವಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸ ರಂಗಾಯಣ ಮಾಡಲಿದೆ ಎಂದು ತಿಳಿಸಿದರು.

ಕಲಬುರಗಿ ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ನಾಸಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಿದ್ದಾರ್ಥ ಚಿಮ್ಮ ಇದ್ದಾಯಿ ತಂಡದಿಂದ ಗಾಂಧೀಜಿ ಕುರಿತು ಗೀತ ಗಾಯನ ನಡೆದವು. ಬಳ್ಳಾರಿ ಶ್ರೀರಾಮಾಂಜನೇಯ ತೊಗಲು ಬೊಂಬೆ ಮೇಳ ಟ್ರಸ್ಟ್‌ನ ಬೆಳಗಲ್ಲು ಹನುಮಂತ ತೊಗಲು ಬೊಂಬೆ ಆಟ ಪ್ರಸ್ತುತ ಪಡಿಸಿದರು. ಬಳ್ಳಾರಿಯ ನಾಡೋಜ ಶ್ರೀಬೆಳಗಲ್ಲು ವೀರಣ್ಣ ಅವರ ನಿರ್ದೇಶನ ಹಾಗೂ ಕಲಬುರಗಿಯ ಕಪಿಲ ಚಕ್ರವರ್ತಿ ನಿರೂಪಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News