ಬಿಜೆಪಿಯ ಆಳಂದ ರಥಯಾತ್ರೆಗೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

Update: 2024-03-02 05:41 GMT

ಕಲಬುರಗಿ: ಆಳಂದ ಪಟ್ಟಣದ ಪ್ರಸಿದ್ಧ ಸೂಫಿ ಸಂತ ಹಜರತ್ ಲಾಡ್ಲೆ ಮಶಾಖ್ (ರ.ಅ) ದರ್ಗಾದ ಆವರಣದಲ್ಲಿದೆ ಎನ್ನಲಾಗುತ್ತಿರುವ ರಾಘವ ಚೈತನ್ಯ ಲಿಂಗದ ಪೂಜೆಗಾಗಿ ಬಿಜೆಪಿ ಹಮ್ಮಿಕೊಂಡಿರುವ ರಥಯಾತ್ರೆಗೆ ಹೈಕೋರ್ಟ್ ನ ಕಲಬುರಗಿ ಪೀಠ ಶುಕ್ರವಾರ ಷರತ್ತುಬದ್ಧ ಅನುಮತಿ ನೀಡಿದೆ.

ನರೋಣ ಗ್ರಾಮದಿಂದ ಆಳಂದ ಪಟ್ಟಣದ ದರ್ಗಾದ ವರೆಗೆ ಹಮ್ಮಿಕೊಂಡಿರುವ ರಥಯಾತ್ರೆಗೆ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಹಿತ ದೃಷ್ಟಿಯಿಂದ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆಳಂದ ಮತಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ಪುತ್ರರಾದ ಹರ್ಷನಂದ ಗುತ್ತೇದಾರ, ಹಿಂದೂ ಜಾಗರಣ ವೇದಿಕೆಯ ನಾಗೇಂದ್ರ ಕಬಾಡೆ ಹಾಗೂ ಎಸ್.ಎ ಪಾಟೀಲ್ ಅವರನ್ನೊಳಗೊಂಡ ಮೂವರು ಅರ್ಜಿದಾರರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಕಲಬುರಗಿ ಪೀಠ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಶಾಂತಿಯುತವಾಗಿ ರಥಯಾತ್ರೆ ನಡೆಸಲು ಪ್ರಮುಖ ಐದು ಷರತ್ತುಗಳನ್ನು ವಿಧಿಸಿ ಅವಕಾಶ ನೀಡಿದೆ.

ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ರಥಯಾತ್ರೆ ನಡೆಸಬಾರದು. ವಿಶೇಷವಾಗಿ ಮಸೀದಿ ಮತ್ತು ಚರ್ಚ್ ಇರುವ ಮಾರ್ಗದಲ್ಲಿ ನಡೆಸದಂತೆ ಮತ್ತು ರಥಯಾತ್ರೆ ವೇಳೆ ಬೇರೆ ಧಾರ್ಮಿಕ ಸಮುದಾಯಗಳ ಭಾವನೆಳಿಗೆ ಧಕ್ಕೆ ಉಂಟುಮಾಡುವ ಘೋಷಣೆಗಳು ಕೂಗದೆ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ರಥಯಾತ್ರೆ ನಡೆಸಬೇಕೆಂದು ತಿಳಿಸಿದೆ.

ಯಾತ್ರೆ ನಡೆಸುವ ಆಯೋಜಕರಿಂದ ಈ ಕುರಿತು ಜಿಲ್ಲಾಡಳಿತ ಮುಚ್ಚಳಿಕೆ ಪಡೆದು ಅದರೊಂದಿಗೆ ಅವರ ವಿಳಾಸದ ದಾಖಲೆ ಮತ್ತು ಆಧಾರ್ ಕಾರ್ಡ್, ಮೊಬೈಲ್ ಹಾಗೂ ದೂರವಾಣಿ ಸಂಖ್ಯೆ ಪಡೆಯಬೇಕೆಂದು ನ್ಯಾಯಲಯ ತನ್ನ ಆದೇಶದಲ್ಲಿ ಸೂಚಿಸಿದೆ.

ಜನಸಾಮಾನ್ಯರ ಸಂಚಾರಕ್ಕೆ ಅಡ್ಡಿಯಾಗದಂತೆ ಸೂರ್ಯಾಸ್ತಮಾನಕ್ಕೆ ಮುನ್ನವೇ ರಥಯಾತ್ರೆ ಕೈಬಿಡಬೇಕು. ಡಿಜೆ ಮತ್ತು ಮ್ಯೂಜಿಕ್ ಸಿಸ್ಟಮ್ ಹಾಕಬಾರದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಶಾಂತಿಯುತವಾಗಿ ರಥಯಾತ್ರೆ ನಡೆಸಬೇಕೆಂದು ಸೂಚನೆ ನೀಡಿ ಆದೇಶಿಸಿದೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News