ಕಲಬುರಗಿ | ಬಯೋಮೆಟ್ರಿಕ್ ಗಾಗಿ 10 ರೂ. ಪಡೆದ ಆರೋಪ : ನ್ಯಾಯಬೆಲೆ ಅಂಗಡಿಯ ಲೈಸೆನ್ಸ್ ಅಮಾನತ್ತಿಗೆ ಆದೇಶ
ಕಲಬುರಗಿ : ಪ್ರತಿ ಮಾಹೆ ಪಡಿತರ ವಿತರಣೆ ಮಾಡುವಾಗ ಬಯೋಮೆಟ್ರಿಕ್ ಪಡೆಯಲು ಪಡಿತರದಾರರಿಂದ ಹಣ ವಸೂಲು ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಮಲಾಪೂರ ತಾಲೂಕಿನ ಕಿಣ್ಣಿ ಸರಪೋಸ್ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ 17ರ ಡೀಲರ್ ರಮೇಶ ಜಿ.ಚವ್ಹಾಣ ಅವರ ಲೈಸೆನ್ಸ್ ಸಂಖ್ಯೆ 844/97ನ್ನು ಮುಂದಿನ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಲಬುರಗಿ ಉಪನಿರ್ದೇಶಕ ಭೀಮರಾಯ ಎಂ.ಆದೇಶ ಹೊರಡಿಸಿದ್ದಾರೆ.
ಕಳೆದ ಡಿ.30 ರಂದು ಪಡಿತರ ಅಂಗಡಿಯಲ್ಲಿ ಪಡಿತರದಾರರಿಂದ ಬಯೋಮೆಟ್ರಿಕ್ ಪಡೆಯಲು 10 ರೂ., 20 ರೂ. ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಚಿತ್ರೀಕರಣ ಮಾಡಿ ಕಮಲಾಪೂರ ತಹಶೀಲ್ದಾರರಿಗೆ ದೂರು ಸಲ್ಲಿಸಿದರು. ಸ್ಥಳಕ್ಕೆ ಆಹಾರ ನಿರೀಕ್ಷಕರನ್ನು ಕಳುಹಿಸಿ ವರದಿ ಪಡೆದ ತಹಶೀಲ್ದಾರರು ವರದಿಯಲ್ಲಿ ಹಣ ಪಡೆದಿರುವುದು ಕಂಡುಬಂದಿದೆ ಎಂದಲ್ಲದೆ ವಿವಿಧ ನ್ಯೂನತೆಗಳ ಕುರಿತು ವರದಿ ನೀಡಿದ್ದರು.
ಅದರಂತೆ ಅಂಗಡಿ ಡೀಲರ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಉತ್ತರ ಪಡೆಯಲಾಗಿದ್ದು, ಉತ್ತರದಲ್ಲಿ ಲೋಪದೋಷ ನಿರಾಕರಿಸುವ ಯಾವುದೇ ದಾಖಲೆ ನೀಡಿಲ್ಲವಾದರಿಂದ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ-2016ರ ಕ್ಲಾಜ್ 12, 14, 18 (2) ಮತ್ತು ತಿದ್ದುಪಡಿ ಆದೇಶ-2017ರ 2(ಇ) ರಂತೆ ಕಿಣ್ಣಿ ಸರಪೋಸ್ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ 17ರ ಡೀಲರ್ ರಮೇಶ ಜಿ.ಚವ್ಹಾಣ ಇವರ ಲೈಸೆನ್ಸ್ ಸಂಖ್ಯೆ 844/97ನ್ನು ಅಮಾನತ್ತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಮಾನತ್ತು ಹಿನ್ನೆಲೆಯಲ್ಲಿ ಎಫ್.ಪಿ.ಎಸ್. 17ರ ಪಡಿತರದಾರರನ್ನು ಹತ್ತಿರದ ಸೂಕ್ತ ನ್ಯಾಯ ಬೆಲೆ ಅಂಗಡಿಗೆ ವರ್ಗಾಯಿಸಿ ಪಡಿತರ ಆಹಾರ ಧಾನ್ಯ ವಿತರಣಕ್ಕೆ ಕ್ರಮ ವಹಿಸಬೇಕೆಂದು ಕಮಲಾಪೂರ ತಹಶೀಲ್ದಾರ್ ಅವರಿಗೆ ಆದೇಶದಲ್ಲಿ ತಿಳಿಸಲಾಗಿದೆ.