ಜೇವರ್ಗಿ | ನ್ಯಾಯಾಲಯದ ಆವರಣದಲ್ಲಿ ಯುವಕನಿಗೆ ಹಲ್ಲೆ: ಮೂವರ ಬಂಧನ

Update: 2025-01-09 05:36 GMT

ಕಲಬುರಗಿ: ನ್ಯಾಯಾಲಯದ ಆವರಣದಲ್ಲೇ ಯುವಕನೋರ್ವನಿಗೆ ಮೂವರು ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಜೇವರ್ಗಿ ಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.

ಯಾತನೂರ್ ಗ್ರಾಮದ ನಿವಾಸಿ ದೇವಿಂದ್ರ (27) ಹಲ್ಲೆಗೆ ಯುವಕ. ಅದೇ ಗ್ರಾಮದ ನಿವಾಸಿಗಳಾದ ಸಿದ್ದು ಮಲ್ಲಪ್ಪ ಪೊಲೀಸ್ ಪಾಟೀಲ್ ಯಾತನೂರ್, ಶಿವಲಿಂಗಪ್ಪ ಮತ್ತು ಶ್ರೀಶೈಲ್ ಕುರನಳ್ಳಿ ಹಲ್ಲೆ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ದೇವಿಂದ್ರ ಹಲ್ಲೆ ಆರೋಪಿಗಳಲ್ಲಿ ಒಬ್ಬನಾದ ಶಿವಲಿಂಗಪ್ಪನ ಸಹೋದರ ಸಂಗಪ್ಪನಿಗೆ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ. ತಾಯಿ ಅನಾರೋಗ್ಯದ ಕಾರಣದ ನೀಡಿ, ಜಾಮೀನಿನ ಮೇಲೆ ಎರಡ್ಮೂರು ತಿಂಗಳ ಹಿಂದೆ ಜೈಲಿನಿಂದ ಹೊರಗೆ ಬಂದಿದ್ದ. ಈ ನಡುವೆ ಶಿವಲಿಂಗಪ್ಪನ ಕುಟುಂಬದ ಯುವತಿಯೊಬ್ಬಳನ್ನು ದೇವಿಂದ್ರ ಪ್ರೀತಿಸುತ್ತಿದ್ದನೆನ್ನಲಾಗಿದೆ. ಈ ಕಾರಣಕ್ಕೆ ಆರೋಪಿಗಳು ದೇವಿಂದ್ರನ ಮೇಲೆ ಹಲ್ಲೆ ಮಾಡಿ ಆಟೋದಲ್ಲಿ ಅಪಹರಿಸಲು ಯತ್ನಿಸಿದ್ದಾರೆ. ಪ್ರತಿರೋಧ ತೋರಿದ ದೇವಿಂದ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ.

ಗಾಯಾಳುವನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News