ಕಲಬುರಗಿ | ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ ಸಂಘಟನೆಗಳು

Update: 2025-01-08 14:57 GMT

ಕಲಬುರಗಿ : ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ರೈತ ಭೀಮರಾವ್ ಪ್ರಭು ಸಲಗರವರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಮೃತ ರೈತನ ಕುಟುಂಬಕ್ಕೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಮತ್ತು ಕರ್ನಾಟಕ ಪ್ರಾಂತ ರೈತ ಸಂಘಟನೆಯ ನಿಯೋಗವು ಭೇಟಿ ನೀಡಿ ಸಾಂತ್ವನ ಹೇಳಿವೆ.

ಕೃಷಿಗಾಗಿ ಕೆಜಿಬಿ ಬ್ಯಾಂಕಿನಲ್ಲಿ ಮತ್ತು ಖಾಸಗಿಯಾಗಿಯೂ ಸಾಲ ಮಾಡಲಾಗಿತ್ತು ಎಂದು ಮೃತ ರೈತನ ತಂದೆ ವಿವರಿಸಿದರು. ಬೆಳೆ ನಷ್ಟದಿಂದಾಗಿ ಮತ್ತು ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾಲ ಕಟ್ಟಲು ಆಗಲಿಲ್ಲ. ಹಾಗಾಗಿ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಮ್ಮ ಅಳಲು ತೋಡಿಕೊಂಡರು. ಇದೇ ಸಂದರ್ಭದಲ್ಲಿ ಪಂಚನಾಮ ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಅಧಿಕಾರಿಗಳು ಬಂದಿದ್ದರು. ಅಲ್ಲಿಗೆ ಭೇಟಿ ಕೊಟ್ಟ ತಾಲೂಕು ದಂಡಾಧಿಕಾರಿ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಸಾಧ್ಯವಾದಷ್ಟು ಬೇಗ ಪಂಚನಾಮದ ವರದಿ ತಯಾರಿಸಿ ದಂಡಾಧಿಕಾರಿಯವರಿಗೆ ತಲುಪಿಸಿ ಇವರ ಸಂಪೂರ್ಣ ಸಾಲ ಮನ್ನಾ ಮಾಡಿ ಇವರ ಕುಟುಂಬಕ್ಕೆ ಪರಿಹಾರ ದೊರಕಿಸಿ ಕೊಡಬೇಕೆಂದು ಸಂಘಟನೆಯ ಮುಖಂಡರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘಟನೆಯ ತಾಲೂಕಾ ಕಾರ್ಯದರ್ಶಿ ಪಾಂಡುರಂಗ ಮಾವಿನಕರ, ಪ್ರಕಾಶ ಜಾನೆ, ಕಮಲಾಕರ ಗಂಜಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ವತಿಯಿಂದ ಸಲ್ಮಾನ ಖಾನ ನಗರ , ಪ್ರಮೋದ್ ಪಾಂಚಾಳ, ಪಂಡಿತ್, ಶ್ರೀಗುರು, ಸಮರ್ಥ ಮತ್ತು ಶರಣು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News