ಕಲಬುರಗಿ | ಯಂತ್ರೋಪಕರಣ ಖರೀದಿಸಿಕೊಡುವುದಾಗಿ ಪ್ರಾಧ್ಯಾಪಕನಿಗೆ 52 ಲಕ್ಷ ರೂ. ವಂಚನೆ; ಪ್ರಕರಣ ದಾಖಲು
ಕಲಬುರಗಿ : ಬೀಜ ಸಂಸ್ಕರಣ ಘಟಕಕ್ಕೆ ಯಂತ್ರೋಪಕರಣಗಳನ್ನು ಕಡಿಮೆ ಬೆಲೆಯಲ್ಲಿ ದುಬೈನಿಂದ ಖರೀದಿಸಿಕೊಡುವುದಾಗಿ ಸಹ ಪ್ರಾಧ್ಯಾಪಕರೊಬ್ಬರನ್ನು ಐವರು ಸೇರಿಕೊಂಡು 52 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರಗಿ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಆನಂದ ನಾಯಕ ಧರ್ಮಣ್ಣ ಎಂಬಾತರೆ ವಂಚನೆಗೆ ಒಳಗಾದವರು. ದೂರಿನನ್ವಯ ಹಣ ಪಡೆದು ವಂಚಿಸಿದ ಆರೋಪದ ಅಡಿಯಲ್ಲಿ ಇದೀಗ ಐವರ ವಿರುದ್ಧ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆ.ಬಿ.ದಯಾನಂದ, ಸಬೀಹ್ ಚಿರುಕುಲ್, ಅನೂಜ್ ಸಾಲ್ಟಿ, ಶೋಹೆಬ್ ಮತ್ತು ಅಬ್ದುಲ್ ಜಲೀಲ್ ಗಜರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಪುರದಲ್ಲಿ ಪ್ರಾಧ್ಯಾಪಕ ಆನಂದ ಅವರ ಪತ್ನಿ ದಾಲ್ ಮಿಲ್ ತೆರೆಯಲು ಉದ್ದೇಶಿಸಿದ್ದರು. ಬೆಂಗಳೂರಿನಲ್ಲಿ ಆನಂದ ಅವರಿಗೆ ಪರಿಚಯವಾದ ಶೋಹೆಬ್ ಮತ್ತು ದಯಾನಂದ 2 ಕೋಟಿ ರೂ. ಯಂತ್ರೋಪಕರಣಗಳನ್ನು ದುಬೈನಿಂದ ಕೇವಲ 1.62 ಕೋಟಿಗೆ ಖರೀದಿಸಿ ಕೊಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ.
ಕೆಲವು ದಿನಗಳ ಬಳಿಕ ತುರ್ತಾಗಿ ಹಣ ಬೇಕಾಗಿದೆ ಎಂದು ಮತ್ತಷ್ಟು ಹಣ ವಸೂಲಿ ಮಾಡಿದ್ದಾರೆ. ಹೀಗೆ ಒಟ್ಟು 62ಲಕ್ಷ ರೂ. ತೆಗೆದುಕೊಂಡು ಹಲವು ತಿಂಗಳು ಕಳೆದ ಬಳಿಕ ಯಾವುದೇ ತರಹದ ಯಂತ್ರೋಪಕರಣಗಳು ಖರೀದಿಸಿ ಕೊಡಲಿಲ್ಲ. ಹಾಗಾಗಿ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದಾಗ 10 ಲಕ್ಷ ರೂ. ಮಾತ್ರ ವಾಪಸ್ಸು ಮಾಡಿದ್ದರು ಎಂದು ಆನಂದ್ ಅವರು ಆರೋಪಿಸಿದ್ದಾರೆ.
ನಂತರ ಅವರಿಗೆ ಕರೆ ಮಾಡಿದರೆ ಅವರ ಫೋನ್ ಸ್ವಿಚ್ ಆಫ್ ಬರುತ್ತಿದೆ. ಅವರ ಬಳಿ ಬಾಕಿ ಇರುವ 52 ಲಕ್ಷ ರೂ. ಹಿಂದೂರಿಗಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.