ಕಲಬುರಗಿ | ಜೇವರ್ಗಿ ಬಂದ್ ಯಶಸ್ವಿಗೊಳಿಸುವಂತೆ ಜ್ಯೋತಿ ಎಂ.ಮರಗೋಳ ಮನವಿ
ಕಲಬುರಗಿ : ಜೇವರ್ಗಿ ಪಟ್ಟಣದಲ್ಲಿ ಶಾಲೆಯಿಂದ ಹಿಂದಿರುಗುತ್ತಿದ್ದ ವೇಳೆ ಕಿಡಿಗೇಡಿಯೊಬ್ಬ ಚುಡಾಯಿಸಿದ ಕಾರಣಕ್ಕೆ ಮನನೊಂದ ಬಾಲಕಿ ಮಹಾಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಖಂಡಿಸಿ, ಕಿಡಿಗೇಡಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಜ.16ರಂದು ಕರೆದಿರುವ ಜೇವರ್ಗಿ ಬಂದ್ ಯಶಸ್ವಿಗೊಳಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜ್ಯೋತಿ ಎಂ.ಮರಗೋಳ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಹೊತ್ತು ಬರುವ ಹೆಣ್ಣು ಮಕ್ಕಳನ್ನು ಕಾಡುವ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ರಾಜ್ಯ ಸರಕಾರ ಸೂಕ್ತ ಕಾನೂನು ರೂಪಿಸಬೇಕೆಂದು ಒತ್ತಾಯಿಸಲು ಬಂದ್ ಗೆ ಕರೆ ನೀಡಲಾಗಿದೆ.
ಈ ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಹಾಸಭಾ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು, ಯುವ ಘಟಕದ ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲರು ಹೋರಾಟಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ಜೊತೆಗೆ, ವಿವಿಧ ಸಮುದಾಯದ ಸಂಘಟನೆಗಳು ಹಾಗೂ ಎಲ್ಲ ಸಮಾಜಗಳ ಬಾಂಧವರು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜೇವರ್ಗಿ ಬಂದ್ ಗೆ ಬೆಂಬಲ ನೀಡುವ ಮೂಲಕ ಮಹಾಲಕ್ಷ್ಮಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಬೆಂಬಲ ನೀಡಬೇಕೆಂದು ಪ್ರಕಟಣೆಯ ಮೂಲಕ ಕೋರಿದ್ದಾರೆ.