ಕಲಬುರಗಿ | ತೊಗರಿ ನಾಶ : ಎಕೆರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಗುತ್ತೇದಾರ್ ಆಗ್ರಹ

Update: 2024-12-03 13:29 GMT

ಕಲಬುರಗಿ : ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆಯ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ, ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಬಿತ್ತನೆಯಾದ 6 ಲಕ್ಷ ಹೆಕ್ಟರ್ಗಿಂತಲೂ ಬೆಳೆ ನೆಟೆ ರೋಗದಿಂದ ಒಣಗಿದೆ. ಗೊಬ್ಬರ, ಔಷಧ, ಬಿತ್ತನೆ ಬೀಜ, ಕೂಲಿಗಾಗಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ವ್ಯವಸಾಯ ಮಾಡಿದ ಹಣ ವಾಪಸ್ ಬರುವುದಿಲ್ಲ ಎಂಬ ಆತಂಕ ರೈತರಲ್ಲಿ ಮೂಡಿದೆ. ರಾಜ್ಯ ಸರಕಾರ ಕೂಡಲೇ ತೊಗರಿ ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆ ಸಮೀಕ್ಷೆ ಮಾಡಿ ಪ್ರತಿ ಎಕೆರೆಗೆ 25 ಸಾವಿರ ಪರಿಹಾರ ನೀಡಬೇಕು. ಅದರ ಜೊತೆಗೆ ಬೆಳೆ ವಿಮೆಯೂ ಮಂಜೂರು ಮಾಡಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ ಮುಖ್ಯಮಂತ್ರಿಗಳು 1 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ತೊಗರಿ ಮಂಡಳಿ ಬಲವರ್ಧನೆಗಾಗಿ ಕನಿಷ್ಠ 30 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ವಿಚಿತ್ರ ರೋಗದಿಂದ ತೊಗರಿ ನಾಶವಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬಹಳಷ್ಟು ತೊಗರಿ ಬೆಳೆ ನಾಶವಾಗುತ್ತಿದೆ. ಇಷ್ಟು ದಿನ ಚೆನ್ನಾಗಿದ್ದು ಈಗ ದಿಢೀರನೆ ಹಾನಿಯಾಗುತ್ತಿದೆ. ಎಂದೂ ಕಂಡಿಲ್ಲದ ರೋಗ ಬಂದಿದ್ದರಿಂದ ಈ ಸಲದ ತೊಗರಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕಾಣುತ್ತಿದೆ ಎಂದು ಬಾಲರಾಜ್ ಗುತ್ತೇದಾರ್ ಕಳವಳ ವ್ಯಕ್ತಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News