ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಯಡ್ರಾಮಿ ಬಂದ್

Update: 2024-12-03 18:27 GMT

ಕಲಬುರಗಿ : ಖಾಸಗಿ ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ದಾಖಲಾಗುತ್ತಿದ್ದಂತೆಯೇ ಯಡ್ರಾಮಿ ತಾಲ್ಲೂಕಿನ ಕರವೇ, ವಿವಿಧ ಸಂಘಟನೆಗಳು ಮಂಗಳವಾರ ಪಟ್ಟಣ ಬಂದ್ ಕರೆಯನ್ನು ನೀಡಿದ್ದವು. ಬಂದ್ ಕರೆಯಿಂದಾಗಿ ಪಟ್ಟಣದ ಎಲ್ಲ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು.

ಘಟನೆಯನ್ನು ಖಂಡಿಸಿ, ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು, ಸಾರ್ವಜನಿಕರು ಸಂಪೂರ್ಣ ಪಟ್ಟಣದಲ್ಲಿ ಸ್ವಇಚ್ಛೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮಂಗಳವಾರ ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿದರು.

ಶಾಲೆಯೊಂದರಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಕಳೆದ ಎರಡು-ಮೂರು ವರ್ಷಗಳಿಂದ ಓದುತ್ತಿದ್ದಳು. ಆ ಶಾಲೆಯ ಮುಖ್ಯಸ್ಥ ಹಾಜಿಮಲಂಗ ಗಣಿಯಾರ ಕಳೆದ ಮೂರು ದಿನದ ಹಿಂದೆ ಶಾಲೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಈ ವಿಷಯವನ್ನು ಮನೆಯಲ್ಲಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಮಗು ಮನೆಯಲ್ಲಿ ತಿಳಿಸಲು ಹಿಂಜರಿದಿದೆ. ನಂತರ ಪಕ್ಕದ ಮನೆಯವರ ಮುಂದೆ ಮಗು ವಿಷಯ ತಿಳಿಸಿದ್ದು, ಅವರು ಮಗುವಿನ ತಂದೆ, ತಾಯಿಗೆ ವಿಷಯ ತಿಳಿಸಿದ್ದಾರೆ. ನಂತರ ಸಂತ್ರಸ್ತ ಮಗುವಿನ ಪೋಷಕರು ಸೋಮವಾರ ಸಂಜೆ ಯಡ್ರಾಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಪಿಎಸ್ಐ ವಿಶ್ವನಾಥ್ ಮುದರೆಡ್ಡಿ ಹಾಗೂ ಅವರ ತಂಡ ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ.

ಪ್ರಕರಣವು ತಾಲ್ಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿದ್ದು, ಮಂಗಳವಾರ ಬೆಳಿಗ್ಗೆ ಬಂಜಾರಾ ಸಮುದಾಯ ಮತ್ತು ವಿವಿಧ ಸಂಘಟನೆಗಳ ಮುಖಂಡರು ಸಾರ್ವಜನಿಕರು ಸೇರಿಕೊಂಡು ಅಂಗಡಿ ಮುಂಗಟ್ಟುಗಳನ್ನು ಸ್ವಇಚ್ಛೆಯಿಂದ ಬಂದ್ ಮಾಡಿ ಆ ಶಾಲೆಯ ಪರವಾನಿಗೆ ರದ್ದುಗೊಳಿಸಿ, ವಿದ್ಯಾರ್ಥಿನಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ 25 ಲಕ್ಷ ರೂ.ಗಳ ಪರಿಹಾರ ಹಾಗೂ ಆರೋಪಿಗೆ ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಿಂದಾಗಿ ಇಡೀ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣದಿಂದ ಸೃಷ್ಠಿಯಾಗಿತ್ತು. ಮುಂಜಾಗ್ರತೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ ಅವರು, ಸ್ಥಳೀಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಯಾವುದೇ ಅಹಿತಿಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.

ಸುದ್ದಿ ತಿಳಿದ ತಕ್ಷಣ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್‌ ಸಿಂಗ್‌ ಅವರು ಸ್ಥಳಕ್ಕೆ ಧಾವಿಸಿ ಹೋರಾಟಗಾರರ ಮನವಿ ಪತ್ರವನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಡಾ.ಅಜಯ್ ಸಿಂಗ್ ಅವರು ಮಾತನಾಡಿ, ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಎರಡೂವರೆ ಲಕ್ಷ ರೂ.ಗಳು ಮತ್ತು ಆ ಶಾಲೆಯ ಮುಖ್ಯಸ್ಥನಿಗೆ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ ಎಂದು ಭರವಸೆ ನೀಡಿದರು. ಇದರಿಂದಾಗಿ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದರು.

Full View

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News