ಕಾಂಗ್ರೆಸ್ ಸರಕಾರ ರೈತರನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ : ಬಿ.ವೈ.ವಿಜಯೇಂದ್ರ

Update: 2024-12-04 15:32 GMT

ಬಿ.ವೈ.ವಿಜಯೇಂದ್ರ

ಕಲಬುರಗಿ : ಸಿಎಂ ಸಿದ್ದರಾಮಯ್ಯ ಅವರ ಸಲಹೆಯಿಂದ ಸಚಿವ ಝಮೀರ್ ಅಹ್ಮದ್ ಕುಮ್ಮಕಿನಿಂದ ರಾಜ್ಯದ ರೈತರಿಗೆ ವಕ್ಫ್ ನೋಟಿಸ್ ನೀಡಿ, ಭೂಮಿ ಕಬಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ನಗರದ ಜಗತ್ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ 'ನಮ್ಮ ಭೂಮಿ ನಮ್ಮ ಹಕ್ಕು' ಘೋಷವಾಕ್ಯದಲ್ಲಿ ವಕ್ಫ್ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಅವರು ಮಾತನಾಡಿದರು.

ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ವಕ್ಫ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ, ಕೇಂದ್ರದಲ್ಲಿ ಮೋದಿ ಅವರು ವಕ್ಫ್ ನೆಪದಲ್ಲಿ ರೈತರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿ ಜೆಪಿಸಿ ಕಮಿಟಿ ರಚಿಸಿ, ಕಮಿಟಿಯಿಂದ ಪ್ರವಾಸ ಮಾಡಿ ಸಮಗ್ರ ವರದಿ ರಚಿಸಿ, ಪಾರ್ಲಿಮೆಂಟ್ ನಲ್ಲಿ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಉದ್ದೇಶಿಸಿದ್ದಾರೆ. ಇದಕ್ಕೆ ಅಡ್ಡಗಾಲು ಹಾಕಿದಂತೆ ಸಿಎಂ ಸಿದ್ದರಾಮಯ್ಯ ಸಲಹೆಯಿಂದ ಸಚಿವ ಝಮೀರ್ ಅಹ್ಮದ್ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಸರಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ನೋಟಿಸ್ ಕೊಟ್ಟು ಭೂಮಿಯನ್ನು ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಒಂದು ಕೋಮಿಗಷ್ಟೇ ಸಿಎಂ ಅಗಿದ್ದಾರೋ ಅಥವಾ ರಾಜಕೀಯ ಸಿಎಂ ಆಗಿದ್ದಾರೋ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯನವರಿಗೆ ಹಿಂದೂಗಳ ವಿರುದ್ಧ ಯಾಕೆ ಅಷ್ಟು ಆಕ್ರೋಶ? ಹಿಂದೂಗಳು, ರೈತರು ನಿಮಗೆ ವೋಟ್ ಹಾಕಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆ ಯಾಕೆ ಮಾಡುತ್ತೀರಿ, ಇದು ನಿಮಗೆ ಶೋಭೆ ತರುತ್ತದ್ದಾ? ಸಿಎಂ ಸಿದ್ದರಾಮಯ್ಯ ಅವರೇ ಅಧಿಕಾರ ಶಾಶ್ವತ ಅಲ್ಲ, ನೀವು ಎಷ್ಟು ದಿನ ಸಿಎಂ ಆಗಿರುವುದು ಮುಖ್ಯ ಅಲ್ಲ, ಏನು ಕೊಡುಗೆ ನೀಡಿದ್ದೀರಿ ಎನ್ನುವುದನ್ನು ಜನರು ಕೇಳುತ್ತಾರೆ ಎಂದರು.

ಕಾಂಗ್ರೆಸ್ ಸರಕಾರ ರೈತರನ್ನು ಬೀದಿಗೆ ತರುವಂತಹ ಕೆಲಸ ಮಾಡುತ್ತಿದೆ, ಸಿಎಂ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ ಯಾವಾಗಬೇಕಾದರೂ ರಾಜೀನಾಮೆ ಕೊಡಬಹುದು. ರಾಜ್ಯದಲ್ಲಿ ಚುನಾಯಿತ ಸರಕಾರ ಇದೆ. ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಯಾರು ಏನು ಬೇಕಾದರೂ ಮಾಡಬೇಕಾದ ಪರಿಸ್ಥಿತಿ ಬಂದಿದೆ, 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ, ಸಚಿವರು ಅಲ್ಲಿ ಭೇಟಿ ನೀಡಿಲ್ಲ ಎಂದು ಪ್ರಿಯಾಂಕ್ ಖರ್ಗೆಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರಿಗೆ ರೈತರಿಗೆ ಪರಿಹಾರ ಕೊಡಿ ಅಂತ ಹೇಳಿದರೆ ಮೋದಿ ಕೊಟ್ಟಿಲ್ಲ ಅಂತ ಹೇಳುತ್ತಿದ್ದಾರೆ, ಸಂಕಷ್ಟದಲ್ಲೂ ರೈತರ ಪರವಾಗಿ ಇರದ ಈ ಸರಕಾರಕ್ಕೆ ಬರುವ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮುಂದೆ ಯಾವಾಗಲಾದರೂ ಚುನಾವಣೆ ನಡೆದರೂ, ಕಾರ್ಯಕರ್ತರ ಶ್ರಮದಿಂದ 130 ಸ್ಥಾನ ಸ್ಪಷ್ಟ ಬಹುಮತದಿಂದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಶಪಥ ಮಾಡಿದರು. ಕಾಂಗ್ರೆಸ್ ಸರಕಾರ ಕೂಡಲೇ ವಕ್ಫ್ ಕುರಿತಾಗಿ ಹೊರಡಿಸಿರುವ ಗೆಜೆಟ್ ವಿತ್ ಡ್ರಾ ಮಾಡಬೇಕು, ಇಲ್ಲದಿದ್ದರೆ ಹೋರಾಟ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮುರುಗೇಶ್ ನಿರಾಣಿ ಮಾತನಾಡಿ, ಬೆಂಗಳೂರಿನ ಮೆಜೆಸ್ಟಿಕ್, ವಿಧಾನಸೌಧ ಕೂಡ ವಕ್ಫ್ ಮಂದಿಯಲ್ಲಿದೆ ಎಂದು ಮಾತಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ನಿಮ್ಮ ಮನೆಗಳು ಸಹ ವಕ್ಫ್ ನಲ್ಲಿ ಸೇರುವುದು ಡೌಟ್ ಇಲ್ಲ ಎಂದು ಹೇಳಿದರು.

ಮಾಜಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಕಾಂಗ್ರೆಸ್ ಕೇವಲ ಸುಳ್ಳುಗಳನ್ನು ಹೇಳಿಕೊಂಡು ಸರಕಾರ ನಡೆಸುತ್ತಿದೆ, ನಾಳೆ ಚುನಾವಣೆ ಘೋಷಣೆಯಾದರೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದರು.

ರೇಣುಕಾಚಾರ್ಯ ಮಾತನಾಡಿ, ಝಮೀರ್ ಅಹ್ಮದ್ ಸಿದ್ದರಾಮಯ್ಯ ಹೇಳುವ ತಾಳಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ, ಆಂಧ್ರಪ್ರದೇಶದಲ್ಲಿ ವಕ್ಫ್ ತೆಗೆದಂತೆ, ರಾಜ್ಯದಲ್ಲೂ ರದ್ದಾಗಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಮೂರು ತಂಡಗಳು ಮಾಡಿಕೊಂಡು ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿದೆ, ರೈತರ ಆಸ್ತಿಗಳನ್ನು ಸರಕಾರ ವಕ್ಫ್ ಮಂಡಳಿಯಲ್ಲಿ ಸ್ವಾಧೀನ ಮಾಡಿಕೊಳ್ಳುತ್ತಿದೆ, ಅದರ ವಿರುದ್ಧ ಮಾಡುತ್ತಿದ್ದೇವೆ, ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ, ಮೊದಲು ಅಪ್ಪನ ಜೊತೆಗೆ ಇಂದು ಮಗನ ಜೊತೆ ಹೋರಾಟಕ್ಕೆ ಇಳಿದಿದ್ದೇವೆ, ಒಂದುವರೆ ವರ್ಷದಿಂದ ಸರಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಭಗವಂತ ಖೂಬಾ, ಬಸವರಾಜ್ ಮತ್ತಿಮಡು, ಸುಭಾಷ್ ಗುತ್ತೇದಾರ್, ವೈಜನಾಥ್ ವಲ್ಲಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ (ಗ್ರಾ) ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್, ಅವಿನಾಶ್ ಜಾಧವ್, ಶೈಲೇಂದ್ರ ಬೆಲ್ದಾಳೆ, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್, ಬೀ.ಜಿ ಪಾಟೀಲ್, ಶಶೀಲ್ ನಮೋಶಿ, ಸಿದ್ದು ಪಾಟೀಲ್, ಶರಣು ಸಲಗಾರ್, ಪಿ.ರಾಜೀವ್, ಅಮರನಾಥ್ ಪಾಟೀಲ್, ಶರಣಪ್ಪ ತಳವಾರ್, ನಿತಿನ್ ಗುತ್ತೇದಾರ್, ಬಾಬುರಾವ್ ಚವ್ಹಾಣ, ಚೆನ್ನಮ್ಮ ಪಾಟೀಲ್, ಶೋಭಾ ಬಾಗೇವಾಡಿ, ಹರ್ಷನoದ ಗುತ್ತೇದಾರ್ ಸೇರಿದಂತೆ ಜಿಲ್ಲಾ ಮುಖಂಡರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News