ಕಲಬುರಗಿ | ಪಿಡಿಓ ಹುದ್ದೆ ನೇಮಕಾತಿಗೆ ಡಿ.7, 8ರಂದು ಪರೀಕ್ಷೆ
ಕಲಬುರಗಿ : ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ 150 ಪಿಡಿಓ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೇ ಡಿ.7 ಮತ್ತು 8 ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಬೇಕು ಮತ್ತು ಯಾವುದೇ ನಕಲಿಗೆ ಅವಕಾಶ ನಿಡಬಾರದೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪರೀಕ್ಷಾ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ಡಿ.7 ರಂದು ಕಲಬುರಗಿ ನಗರದ 36 ಕೇಂದ್ರದಲ್ಲಿ ಮತ್ತು ಡಿ.8 ರಂದು 45 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಕ್ರಮವಾಗಿ 11,623 ಮತ್ತು 14,895 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆ ಮುನ್ನ ಕೇಂದ್ರದ ಮುಖ್ಯಸ್ಥರು, ಕೇಂದ್ರದಲ್ಲಿ ಬೆಳಕು, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶದ ಮುನ್ನ ಸೂಕ್ತ ತಪಾಸಣೆಗೆ ಪುರುಷ, ಮಹಿಳಾ ಪೊಲೀಸ್ ಪೇದೆಯರನ್ನು ನಿಯೋಜಿಸಬೇಕೆಂದು ಅಧಿಕಾರಿಗಳಿಗೆ ಡಿ.ಸಿ. ಅವರು ನಿರ್ದೇಶನ ನೀಡಿದರು.
ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಇಲ್ಲಿ ಅವಕಾಶ ಇರುವುದಿಲ್ಲ. ಪರೀಕ್ಷೆ ದಿನ ಏನಾದರೆ ಲೋಪಗಳಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಪರೀಕ್ಷೆ ದಿನದಂದು ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದರು.
ಪರೀಕ್ಷೆ ಸುಗಮವಾಗಿ ಜರುಗಲು ಪ್ರತಿ ಕೇಂದ್ರಕ್ಕೆ ಒಬ್ಬರಂತೆ 71 ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು, 28 ಜನ ಅಧಿಕಾರಿಗಳನ್ನು, ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದ ಡಿ.ಸಿ ಅವರು, ಅಭ್ಯರ್ಥಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಶಾಲಾ ಶಿಕ್ಷಣ ಇಲಾಖೆ (ಪ್ರೌಢಾ ಶಿಕ್ಷಣ) ಉಪನಿರ್ದೇಶಕ ಸೂರ್ಯಕಾಂತ ಮದಾನೆ ಸೇರಿದಂತೆ ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರು, ವೀಕ್ಷಕರು, ಜಾಗೃತ ದಳದ ಸದಸ್ಯರು, ರೂಟ್ ಅಧಿಕಾರಿಗಳು ಹಾಜರಿದ್ದರು.