ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿದರೆ ಕೇಸ್ : ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ

ಕಲಬುರಗಿ : ಎಮ್ ಆರ್ ಪಿ ಗಳಲ್ಲಿ ಮದ್ಯಪಾನ ಖರೀದಿಸಿ ಮೋಜು ಮಸ್ತಿಗಾಗಿ ಸಾರ್ವಜನಿಕ ಜಾಗಗಳಲ್ಲಿ, ಪಾರ್ಕ್ ಹಾಗೂ ನಗರದ ಹೊರ ವಲಯಗಳಲ್ಲಿ ಕೂತು ಕುಡಿಯುವವರ ಮೇಲೆ ಕಲಬುರಗಿ ವಿಭಾಗ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ 359 ಕೇಸ್ ದಾಖಲಾಗಿವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಎಂದು ತಿಳಿಸಿದರು.
ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಬುರಗಿ ವಿಭಾಗದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಪ್ರಕರಣಗಳನ್ನು ತಡೆಗಟ್ಟಲು ಜನರು ನಿಗದಿತ ಸ್ಥಳದಲ್ಲಿ ಕುಳಿತು ಕುಡಿಯಲು ಸಿಎಲ್ 7 ಹೆಚ್ಚಿಸಲಾಗುತ್ತಿದೆ ಹಾಗೂ ಪೊಲೀಸ್ ಇಲಾಖೆಯ ಸಹಾಯ ಪಡೆದು ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವವರ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಮುಖ್ಯವಾಗಿ ಇಲಾಖೆ ಸುಧಾರಣೆ ಹಾಗೂ ಸಮಸ್ಯೆಗಳ ಪರಿಹಾರಗಳ ಕುರಿತು ಸಲಹೆಗಳನ್ನು ಪಡೆಯಲಾಯಿತು. ಕಲಬುರಗಿ ವಿಭಾಗ ವ್ಯಾಪ್ತಿಯಲ್ಲಿ ಮದ್ಯಪಾನ ವಾರ್ಷಿಕ ವಹಿವಾಟು ಕುರಿತು ಚರ್ಚಸಿಲಾಯಿತು. ಈ ಸಾಲಿನಲ್ಲಿ ವಹಿವಾಟು ಸ್ವಲ್ಪ ಕಡಿಮೆಯಾಗಿರುವುದಕ್ಕೆ ಕಾರಣಗಳ ಕುರಿತು ಇಲಾಖೆ ಮಟ್ಟದಲ್ಲಿ ಇತರೆ ಮಾದಕ ದ್ರವ್ಯಗಳ ಸರಬರಾಜು ಮೇಲೆ ನಿಗಾವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಗಾಂಜಾ ಹಾಗೂ ಇತರೆ ಮಾರಕ, ಮಾದಕ ದ್ರವ್ಯಗಳ ಮಾರಾಟವನ್ನು ಹಾಗೂ ಹಳ್ಳಿಗಳಲ್ಲಿ ಮನೆಗಳಲ್ಲಿ ಮದ್ಯಪಾನ ಮಾರಾಟ ಮಾಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ಇಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಬೇಸಿಗೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು ಕೆಲವೆಡೆ ಬೆಳೆಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಎಲ್ಲರಿಗೂ ಒಂದೆಯಾಗಿದ್ದು, ನೆರೆ ರಾಜ್ಯಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾದಾಗ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸಬೇಕಾಗುತ್ತದೆ. ನಮಗೆ ಕುಡಿಯುವ ನೀರಿನ ಸಮಸ್ಯೆಯಾದಲ್ಲಿ ಪಕ್ಕದ ಮಹಾರಾಷ್ಟ್ರದೊಂದಿಗೆ ನೀರು ಕೇಳಲಾಗುವುದು ಎಂದರು.
ಕಲ್ಯಾಣ ಕರ್ನಾಟಕ 371(ಜೆ) ಅಡಿಯಲ್ಲಿ ಅಬಕಾರಿ ಇಲಾಖೆಯಲ್ಲಿ ಬಡ್ತಿ ಸಮಸ್ಯೆ ಇದ್ದರೆ ಸರಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ, ಶಾಸಕರಾದ ಅಲ್ಲಮ ಪ್ರಭು ಪಾಟೀಲ್, ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಡಾ.ವೈ.ಮಂಜುನಾಥ , ಅಬಕಾರಿ ಜಂಟಿ ಆಯುಕ್ತರು (ಐಎಂಎಲ್) ನಾಗರಾಜಪ್ಪ, ಪ್ರಭಾರ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಕಲಬುರಗಿ ವಿಭಾಗದ ಡಾ.ಸಂಗನಗೌಡ ಸಿ.ಹೊಸಳ್ಳಿ ಅವರು ಉಪಸ್ಥಿತರಿದ್ದರು.