ಸಮಾಜದ ಸ್ವಾಸ್ಥ್ಯ ಹೆಚ್ಚಿಸುವ ಕೃತಿಗಳು ಹೊರಬರಲಿ: ಡಾ. ಶ್ರೀಶೈಲ ನಾಗರಾಳ

ಕಲಬುರಗಿ : ಇಂದಿನ ಸಮಾಜದಲ್ಲಿ ಎಲ್ಲ ರಂಗಗಳು ಹಾದಿ ತಪ್ಪುತ್ತಿವೆ. ಸಮಾಜವನ್ನು ಸರಿ ದಾರಿಗೆ ತರುವ ಕಾರ್ಯವನ್ನು ನಮ್ಮ ಸಾಹಿತ್ಯ ಮಾಡುತ್ತದೆ. ಇದರಲ್ಲಿ ಬರಹಗಾರರ ಪಾತ್ರ ಬಹು ಮುಖ್ಯವಾಗಿದೆ. ಈ ದಿಸೆಯಲ್ಲಿ ಸಮಾಜದ ಸ್ವಾಸ್ಥ್ಯ ಹೆಚ್ಚಿಸುವ ಸಾಹಿತ್ಯ ಕೃತಿಗಳು ಹೊರಬರಲಿ ಎಂದು ಹಿರಿಯ ಸಾಹಿತಿ ಡಾ. ಶ್ರೀಶೈಲ ನಾಗರಾಳ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಅಂತರಾಷ್ಟ್ರಿಯ ಮಹಿಳಾ ದಿನ ಹಾಗೂ ಯುಗಾದಿ ಪ್ರಯುಕ್ತ ಏರ್ಪಡಿಸಿದ್ದ ಕಾವ್ಯ ಬೇವು ವಿಶೇಷ ಮಹಿಳಾ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ರಾಜ್ಯದಲ್ಲಿ ಆಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಲಗಾಮು ಇಲ್ಲವಾಗಿದೆ. ಭ್ರಷ್ಟಾಚಾರ ಮಿತಿ ಮೀರಿದರೆ ಶ್ರೀಸಾಮಾನ್ಯನಿಗೆ ಉಳಿಗಾಲವಿಲ್ಲ. ಈ ವ್ಯವಸ್ಥೆ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಡುವ ಅನಿವಾರ್ಯತೆ ಇದೆ ಎಂದು ಹೇಳಿದ ಅವರು, ಬೆಳಕಿಗೆ ಬಾರದ ಗ್ರಾಮೀಣ ಭಾಗದ ಮಹಿಳೆಯರು ಸಾಹಿತ್ಯಿಕ ಬರವಣಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಪರಿಷತ್ತು ಇಂಥ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಹಿರಿಯ ಲೇಖಕಿ ಡಾ. ಕಾವ್ಯಶ್ರೀ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳುಂಡಗಿ, ಪಾಲಕೆ ಉಪ ಮೇಯರ್ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರ, ಕಸಾಪ ತಾಲೂಕಾಧ್ಯಕ್ಷ ಶಿವಲೀಲಾ ಕಲಗುರ್ಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ತಾಲೂಕಾ ಕಸಾಪ ದ ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ವಿಶಾಲಾಕ್ಷಿ ಮಾಯಣ್ಣವರ್, ಭಾಗ್ಯಶ್ರೀ ಮರಗೋಳ, ಶರಣು ಹಾಗರಗುಂಡಗಿ, ಕವಿತಾ ಕವಳೆ ವೇದಿಕೆ, ರಾಜೇಂದ್ರ ಮಾಡಬೂಳ ಮೇಲಿದ್ದರು.
ಅನೇಕ ಕವಿಗಳು ವಾಚಿಸಿದ ಸ್ವ ರಚಿತ ಕವನಗಳು ಪ್ರೇಕ್ಷಕರ ಮನಗೆದ್ದವು. ವಿವಿಧ ಕ್ಷೇತ್ರದ ಸಾಧಕರಿಗೆ ಅನುಪಮ ಗೌರವ ಪುರಸ್ಕಾರವನ್ನು ನೀಡ ಸತ್ಕರಿಸಲಾಯಿತು.