ಹೇರೂರ ಶಕ್ತಿ ಕೇಂದ್ರದ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ : ಎಂಎಲ್ಸಿ ಕಮಕನೂರ

Update: 2024-12-04 13:15 GMT

ಕಲಬುರಗಿ : ಅಫಜಲ್‌ಪುರ ತಾಲೂಕಿನ ದೇವಲ ಗಾಣಗಾಪೂರ ಗ್ರಾಮದಲ್ಲಿರುವ ದಿ.ವಿಠ್ಠಲ ಹೇರೂರವರ ಶಕ್ತಿ ಕೇಂದ್ರದ ಅಭಿವೃದ್ಧಿಗೆ ಸುಮಾರು 2 ಕೋಟಿ ರೂ. ಹಣ ಬಿಡುಗಡೆಗಾಗಿ ನಾನು ಮತ್ತು ಶಾಸಕ ಎಂ.ವೈ.ಪಾಟೀಲ್ ಅವರು ಸೇರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಭರವಸೆ ನೀಡಿದ್ದಾರೆ.

ಅಫಜಲ್‌ಪುರ ತಾಲೂಕಿನ ದೇವಲಗಾಣಗಾಪೂರ ಗ್ರಾಮದ ದಿ.ವಿಠ್ಠಲ ಹೇರೂರವರ ಶಕ್ತಿ ಕೇಂದ್ರದಲ್ಲಿ ಹೇರೂರವರ ಕುಟುಂಬಸ್ಥರು ಹಮ್ಮಿಕೊಂಡಿದ್ದ ದಿ.ವಿಠ್ಠಲ ಹೇರೂರವರ 11ನೇ ಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಹೇರೂರವರ ಕಂಚಿನ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಈ ಶಕ್ತಿ ಕೇಂದ್ರ ಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕಾಗಿದೆ, ಇದಕ್ಕೆ ಪ್ರತಿಯೊಬ್ಬರು ಸಹಕಾರ ಅಗತ್ಯ ಎಂದರು.

ವಿಠ್ಠಲ ಹೇರೂರವರು ಒಬ್ಬ ವ್ಯಕ್ತಿ ಅಲ್ಲ, ಅವರೊಬ್ಬ ಕೋಲಿ ಸಮಾಜದ ದೊಡ್ಡ ಶಕ್ತಿಯಾಗಿದ್ದರು ಎಂದು ತಿಳಿಸಿದ ಅವರು, ಅತ್ಯಂತ ಕೆಳ ವರ್ಗದಲ್ಲಿರುವ ಮತ್ತು ಶೋಷಿತ ಜನಾಂಗ ಇರುವ ಕೋಲಿ ಕಬ್ಬಲಿಗ ಸಮುದಾಯದಲ್ಲಿ ಬರುವ 39 ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸಂವಿಧಾನಬದ್ದ ನ್ಯಾಯ ಕೊಡಿಸಲು ಸುಮಾರು ವರ್ಷಗಳ ಕಾಲ ಲಕ್ಷ ಲಕ್ಷ ಜನ ಸೇರಿಸಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆದು, ಒತ್ತಡ ಹಾಕಿ ಈ ಸಮುದಾಯಕ್ಕೆ ಮೀಸಲಾತಿ ಕಲ್ಪಸಿಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅರುಣಕುಮಾರ ಪಾಟೀಲ ಹಾಗೂ ಕೋಲಿ ಸಮಾಜದ ಮುಖಂಡರಾದ ಲಚ್ಚಪ್ಪ ಜಮಾದಾರವರು ಮಾತನಾಡಿದರು.

ವಿಠ್ಠಲ ಹೇರೂರವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ನಿಜ ಶರಣ ಅಂಬಿಗರ ಚೌಡಯ್ಯನವ ಗದ್ಯ ಪುರಾಣ ಗ್ರಂಥ ಬಿಡುಗಡೆ ಹಾಗೂ ಕಾಶಿ ಮಾದರಿಯ ಗಂಗಾ ಆರತಿ ಮಹೋತ್ಸವ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ಶಕ್ತಿ ಕೇಂದ್ರದಲ್ಲಿ ಜರುಗಿದವು.

ನೆರೆ ರಾಜ್ಯ ಮಹಾರಾಷ್ಟ್ರ ಹಾಗೂ ಜಿಲ್ಲೆ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಗಣ್ಯರು , ರಾಜಕೀಯ ಪ್ರತಿನಿಧಿಗಳು, ವಿವಿಧ ಧರ್ಮಗಳ ಮತ್ತು ಸಮಾಜದ ಗಣ್ಯರು ಮುಖಂಡರು, ಹೇರೂರವರ ಕುಲ ಬಂಧುಗಳು ಅಭಿಮಾನಿಗಳು, ಹೇರೂರವರ ಶಕ್ತಿ ಕೇಂದ್ರಕ್ಕೆ ಆಗಮಿಸಿ ಹೇರೂರವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮತೀನ ಪಟೇಲ, ವಿಠ್ಠಲ ಹೇರೂರು ಅವರ ದೊಡ್ಡಪ್ಪ ಭಗವಂತಪ್ಪ ಹೇರೂರ, ಲಕ್ಷ್ಮಣ ಹೇರೂರು, ಬಸವರಾಜ್ ಹೇರೂರು, ಗುರುನಾಥ ಹೇರೂರು, ಸಂಸ್ಥೆಯ ಪ್ರಾಂಶುಪಾಲರಾದ ರಾಜಶೇಖರ್ ತಲಾರಿ ನೀಲಕಂಠ ಜಮಾದಾರ್, ಲಕ್ಷ್ಮಣ ಅವಟಿ, ಬಸವರಾಜ ಬೂದಿಹಾಳ, ನಾಗೇಂದ್ರಪ್ಪ ಲಿಂಗಪಲ್ಲಿ, ಸುಧೀರ್ ಸಂಘಾಣಿ, ರಾಮಲಿಂಗ ನಾಟಿಕರ್, ಸೈಬಣ್ಣ ವಡಗೇರಿ,ದಿಗಂಬರ ಕಾಡಪ್ಪಗೊಳ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News