ಕಲಬುರಗಿ | ನೆಟೆ ರೋಗ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿ : ನಾಗರಾಜ ಶೇಗಜಿ

Update: 2024-12-04 13:30 GMT

ಕಲಬುರಗಿ : ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆಯ ಸಮೀಕ್ಷೆ ಮಾಡಿ ರೈತರಿಗೆ ಸೂಕ್ತ ಪರಿಹಾರ, ಬೆಳೆ ವಿಮೆ ಮಂಜೂರಿ ಮಾಡಬೇಕು ಎಂದು ಆಳಂದ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಶೇಗಜಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೆಟೆ ರೋಗದಿಂದ ಒಣಗುತ್ತಿರುವ ತೊಗರಿ ಬೆಳೆ ಸಮೀಕ್ಷೆ ಮಾಡಿ ಪ್ರತಿ ಎಕೆರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಅದರ ಜೊತೆಗೆ ಬೆಳೆ ವಿಮೆಯೂ ಮಂಜೂರು ಮಾಡಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 12 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಿ ಮುಖ್ಯಮಂತ್ರಿಗಳು 1 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಲ ಉತ್ತಮ ಮಳೆ ಬಂದು ತೊಗರಿ ಬೆಳೆಯು ಸಹ ಚೆನ್ನಾಗಿ ಬೆಳೆದಿತ್ತು. ಆದಾಗ್ಯೂ, ನೆಟೆರೋಗ ರೋಗ ಬಂದಿದ್ದರಿoದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸಮಗ್ರ ವರದಿ ತಯಾರಿಸಿ ರೈತಾಪಿ ವರ್ಗಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ನೆಟೆ ರೋಗದಿಂದ ತೊಗರಿ ನಾಶವಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳು ಸೇರಿದಂತೆ ಆಳಂದ ತಾಲ್ಲೂಕಿನಲ್ಲಿ ಬಹಳಷ್ಟು ತೊಗರಿ ಬೆಳೆ ನಾಶವಾಗುತ್ತಿದೆ. ಇಷ್ಟು ದಿನ ಚೆನ್ನಾಗಿದ್ದು ಈಗ ದಿಢೀರನೆ ಹಾನಿಯಾಗುತ್ತಿದೆ. ಈ ಸಲದ ತೊಗರಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಕಾಣುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News