ಕಲ್ಯಾಣ ಕರ್ಣಾಟಕದ 7 ಜಿಲ್ಲೆಗಳ ಎಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸವಾಲಾಗಿ ಸ್ವೀಕರಿಸಿ : ಡಾ.ಅಜಯ್ ಸಿಂಗ್
ಕಲಬುರಗಿ : ಕಲ್ಯಾಣ ಕರ್ಣಾಟಕದ 7 ಜಿಲ್ಲೆಗಳ ಎಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸವಾಲಾಗಿ ಸ್ವೀಕರಿಸಿ, ಮುಂದಿನ 100 ದಿನಗಳಲ್ಲಿ ಹೆಚ್ಚಿನ ಪರಿಶ್ರಮ ವಹಿಸುವ ಮೂಲಕ ಪರೀಕ್ಷೆ ಬರೆಯಲು ಮಕ್ಕಳಿಗೆ ಸಿದ್ಧ ಮಾಡುವಂತೆ ಕಲ್ಯಾಣದ ಜಿಲ್ಲೆಗಳ ಎಲ್ಲಾ ಡಿಸಿ , ಸಿಇಓ, ಡಿಡಿಪಿಐಗಳಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಕರೆ ನೀಡಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಕಲಬುರಗಿಯ ಶಿಕ್ಷಣ ಆಯುಕ್ತಾಲಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣದ ಜಿಲ್ಲೆಗಳಲ್ಲಿ ಸಾಗಿರುವ ಅಕ್ಷರ ಆವಿಷ್ಕಾರ ಅನುಷ್ಠಾನ, ಎಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕ್ರಮಗಳ ಕುರಿತಂತೆ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದಿರುವ ಕೆಲಸ ಕಾರ್ಯಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಅಕ್ಷರ ಆವಿಷ್ಕಾರ ಯೋಜನೆ ರೂಪಿಸಿ ತಾವು ಶಿಕ್ಷಣ ಇಲಾಖೆಗೆ ಸಾಕಷ್ಟು ಅನುದಾನ ನೀಡಿರುವುದಾಗಿ ಹೇಳಿದ ಡಾ.ಅಜಯ್ ಸಿಂಗ್, ನೀವು ಅದಕ್ಕೆ ಪ್ರತಿಯಾಗಿ ಫಲಿತಾಂಶದಲ್ಲಿ ಸುಧಾರಣೆ ಮಾಡಬೇಕು ಎಂದು ಹೇಳಿದರು. ನಮ್ಮ ಭಾಗದ ಮಕ್ಕಳು ಎಸೆಸ್ಸೆಲ್ಸಿ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಬೇಕು. ಕಲ್ಯಾಣ ಕರ್ಣಾಟಕದ 7 ಜಿಲ್ಲೆಗಳ ಫಲಿತಾಂಶದಲ್ಲಿ ಸುಧಾರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಅತಿಥಿ ಶಿಕ್ಷಕರ ವೇತನ ಹೆಚ್ಚಿಸುವ ಚಿಂತನೆ :
ಅಕ್ಷರ ಮಿತ್ರ ಯೋಜನೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಅವರಿಗೆ ವೇತನ ಪಗಾರ ಬೋಡ್ರ್ ನೀಡುತ್ತಿದೆ. ಇಷ್ಟಾದರೂ ಮತ್ತೆ ಶಿಕ್ಷಕರ ಕೊರತೆ ಯಾಕೆ? ಇವರ ವೇತನದಲ್ಲಿ ಅಲ್ಪ ಹೆಚ್ಚಳ ಮಾಡುವ ಚಿಂತನೆ ಇದೆ. ಅರ್ಹರನ್ನು ನೇಮಕ ಮಾಡಿಕೊಂಡು ಮಕ್ಕಳಿಗೆ ಉತ್ತಮ ಬೋಧನೆ ನೀಡಿ ಎಂದು ಜಿಲ್ಲಾಡಳಿತದ ಪ್ರಮುಖರಿಗೆ ಸೂಚಿಸಿದರು.
15 ದಿನಕ್ಕೊಂದು ಪರೀಕ್ಷೆ : ಬಳ್ಳಾರಿ ಸಿಇಓ
ಕಲಬುರಗಿ ಆಯುಕ್ತಾಲಯದಲ್ಲಿ ನಡೆದ ಸಭೆಯಲ್ಲಿ ಕಲ್ಯಾಣ ನಾಡಿನ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರಿನ ಡಿಸಿ, ಸಿಇಓಗಳು ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು. ಬಳ್ಳಾರಿ ಸಿಇಓ ರಾಹುಲ್ ಮಾತನಾಡಿ, 15 ದಿನಕ್ಕೊಂದು ಪರೀಕ್ಷೆ ಶುರು ಮಾಡಿರೋದು ಉತ್ತಮ ಸ್ಪಂದನೆ ದೊರಕಿದೆ, ನಾವೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡುತ್ತಿದ್ದು, ಮಕ್ಕಳು ಉತ್ತಮ ಸಾಧನೆ ತೋರುತ್ತಿದ್ದಾರೆಂದರು.
ನಾನು ಕೆಕೆಆರ್‌ಡಿಬಿ ಅಧ್ಯಕ್ಷನಾದ ತಕ್ಷಣವೇ ಕಲ್ಯಾಣ ಭಾಗದ 7 ಜಿಲ್ಲೆಗಳಲ್ಲಿನ ಶಾಲಾ ಶಿಕ್ಷಣ ಸುಧಾರಣೆಗೆ ಆದ್ಯತೆ ನೀಡಿದ್ದರ ಫಲವಾಗಿ ಅಕ್ಷರ ಆವಿಷ್ಕಾರ ಯೋಜನೆ ತಂದಿದ್ದೇನೆ, ಶೇ.25ರಷ್ಟು ಹಣ ಈ ಯೋಜನೆಗೆ ಮೀಸಲಿಟ್ಟು 2 ವರ್ಷ ಶೈಕ್ಷಣಿಕ ವರ್ಷವಾಗಿ ಘೋಷಿಸಿದ್ದೇನೆ. ಇವೆಲ್ಲ ಸವಾಲು ನಾವು ಮೆಟ್ಟಿ ನಿಂತಿದ್ದೇವೆ. ಅಧಿಕಾರಿಗಳು ದೂರಗಾಮಿ ಚಿಂತನೆ ಮಾಡಿ ಯೋಜನೆ ಜಾರಿಗೆ ತನ್ನಿ, ಇದರಿಂದ ಇಡೀ ಪ್ರದೇಶ ಅಭಿವೃದ್ಧಿಯಾಗಲಿದೆ.
- ಡಾ. ಅಜಯ್ ಧರ್ಮಸಿಂಗ್, ಅಧ್ಯಕ್ಷರು