ಕಲಬುರಗಿ | ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ಕಲಬುರಗಿ : ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗೋದುತಾಯಿ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.
ಆಳಂದ ಪಟ್ಟಣದ ನಿವಾಸಿ ಬಾಷಾ ಮಕಾಂದರ್ ಅವರ ಮಗಳು ನಮೀರಾ ಸರ್ವಾತ್ (18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಪಿಯುಸಿ ಸೈನ್ಸ್ ನಲ್ಲಿ ಓದುತ್ತಿರುವ ನಮೀರಾ ಇಂದು(ಬುಧವಾರ) ಆಳಂದ ಪಟ್ಟಣದಿಂದ ಕಲಬುರಗಿಗೆ ಬಂದಿದ್ದಳು, ಗೋದುತಾಯಿ ಹಾಸ್ಟೆಲ್ ಗೆ ಬಂದು ಬಳಿಕ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾಳೆ. ಬಳಿಕ ಸಹಚರ ವಿದ್ಯಾರ್ಥಿನಿಯರು ಕಾಲೇಜಿಗೆ ಕರೆದಾಗ ತಾನು ಆಮೇಲೆ ಬರುತ್ತೇನೆ ಎಂದು ಹೇಳಿದ್ದಳು ಎನ್ನಲಾಗಿದೆ. ನಂತರ ರೂಮಿನಲ್ಲಿ ಯಾರೂ ಇರದೇ ಇದ್ದಾಗ ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಈ ಕುರಿತಾಗಿ ಸಹಚರ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಾಗಿ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.