ಕಲಬುರಗಿ | ಜನನಿ ಸುರಕ್ಷಾ ಯೋಜನೆ ಅನುಷ್ಠಾನ

Update: 2024-12-04 13:26 GMT

ಪ್ರಿಯಾಂಕ್ ಖರ್ಗೆ

ಕಲಬುರಗಿ : ಸಾಂಸ್ಥಿಕ ಕೇಂದ್ರಗಳಲ್ಲಿ ಹೆರಿಗೆಯಾದ ನಂತರ ತಾಯಂದಿರಿಗೆ ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಪ್ರೋತ್ಸಾಹ ಧನ ನೀಡುವಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏ.1 ರಿಂದ ಡಿ.1ರವರೆಗೆ ಜಿಲ್ಲೆಯಲ್ಲಿ ಇದೂವರೆಗೆ 108 ಕೇಂದ್ರಗಳಲ್ಲಿ 29,314 ಹೆರಿಗೆಗಳಾಗಿದ್ದು, ಅವರ ಪೈಕಿ 23,987 ತಾಯಂದಿರು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಹಾಗೂ ಇದೂವರೆಗೆ ಹೆರಿಗೆ ಆದ ತಾಯಂದಿರಲ್ಲಿ ಶೇ.82 ಜನರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದರು.

ಜನನಿ ಸುರಕ್ಷಾ ಯೋಜನೆ (JSY) ಯಡಿಯಲ್ಲಿ ಸಾಂಸ್ಥಿಕ ಕೇಂದ್ರಗಳಲ್ಲಿ ಹೆರಿಗೆಯಾದ ನಂತರ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ಯಾವುದೇ ವಯೋಮಿತಿ ಮತ್ತು ಜೀವಂತ ಜನನಕ್ಕೆ ನಿರ್ಬಂಧ ವಿಧಿಸದೇ ಎಲ್ಲಾ ಸರಕಾರಿ ಹಾಗೂ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂಭವಿಸಿದರೆ ಅಂತಹ ಫಲಾನುಭವಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ಆದರೆ 700 ರೂ. ಮತ್ತು ನಗರ ಪ್ರದೇಶಗಳಲ್ಲಿ ಹೆರಿಗೆ ಆದರೆ 600 ರೂ. ಮೊತ್ತವನ್ನು ನೇರವಾಗಿ ಫಲಾನುಭವಿಯ ಖಾತೆಗೆ K-2 ಮುಖಾಂತರ ರಾಜ್ಯ ಮಟ್ಟದಿಂದ ಪಾವತಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸುವ ಸಲುವಾಗಿ ಜನನಿ ಸುರಕ್ಷಾ ಯೋಜನೆಯ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಹಾಗಾಗಿ, ಗರ್ಭಿಣಿ ಮಹಿಳೆಯರು ಸಾಂಸ್ಥಿಕ ಕೇಂದ್ರ ಗಳಲ್ಲಿ ಹೆರಿಗೆ ಮಾಡಿಸಿಕೊಂಡು ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಸಚಿವರು, ಯೋಜನೆ ಅನುಷ್ಠಾನ ಮಾಡಿದ ಜಿಲ್ಲೆಗಳಲ್ಲಿಯೇ ಕಲಬುರಗಿ ಜಿಲ್ಲೆ ಮೊದಲ ಸ್ಥಾನ ಗಳಿಸಿದ್ದು ಖುಷಿ ತರುವ ವಿಚಾರವಾಗಿದೆ ಎಂದರು.

ಪ್ರತಿ ಬುಧವಾರಕ್ಕೆ ಒಮ್ಮೆ ವಿಶೇಷವಾಗಿ ಜನನಿ ಸುರಕ್ಷಾ ಯೋಜನೆ ಅಭಿಯಾನ ಮಾಡಿ, ಆ ದಿನ ಪ್ರತಿ ಗಂಟೆಗೊಮ್ಮೆ ಪ್ರಗತಿಯ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News