ಕಲಬುರಗಿ | ಕಾಗಿಣಾ ನದಿಯಲ್ಲಿ ನಾಪತ್ತೆಯಾದ ಇಬ್ಬರು ಬಾಲಕರ ಮೃತದೇಹ ಪತ್ತೆ

Update: 2024-12-03 18:00 GMT

ಕಲಬುರಗಿ : ಸೇಡಂ ಕಾಗಿಣಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಮೃತದೇಹ ಮಂಗಳವಾರ ಪತ್ತೆಯಾಗಿದೆ.

ಸೇಡಂ ತಾಲ್ಲೂಕಿನ ಕುಕ್ಕುಂದಾ ಗ್ರಾಮದ ಬಳಿ ಕಾಗಿಣಾ ನದಿಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದ ಘಟನೆ ಭಾನುವಾರ ಸಂಜೆ ನಡೆದಿತ್ತು. 17 ವರ್ಷ ವಯಸ್ಸಿನ ಅಬ್ದುಲ್ ರೆಹಮಾನ್, 16 ವರ್ಷ ವಯಸ್ಸಿನ ಮುಹಮ್ಮದ್ ಕೈಫ್ ಅವರಿಬ್ಬರೂ ಕಾಗಿಣಾ ನದಿಯಲ್ಲಿ ಈಜಾಡಲು ತೆರಳಿದ ಸಂದರ್ಭದಲ್ಲಿ ಈಜು ಬರದ ಅಬ್ದುಲ್ ರೆಹಮಾನ್ ಮುಳುಗುತ್ತಿದ್ದರು ರೆಹಮಾನ್‌ರನ್ನು ರಕ್ಷಿಸಲು ಹೋದ ಮುಹಮ್ಮದ್ ಕೈಫ್ ಸಹ ನೀರಿನಲ್ಲಿ ಮುಳುಗಿದ್ದರು.

ಮಾಹಿತಿ ಪಡೆದ ಮಳಖೇಡ್ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಕಲಬುರಗಿ ಹಾಗೂ ಸೇಡಂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮೀನುಗಾರರು ನೀರಿನಲ್ಲಿ ಮುಳುಗಿದ ಬಾಲಕರ ಹುಡುಕಾಟವನ್ನು ಮೂರು ದಿನಗಳಿಂದ ಕೈಗೊಂಡಿದ್ದರು. ಮಂಗಳವಾರ ಬೆಳಿಗ್ಗೆ 7.30ಕ್ಕೆ ಕುಕ್ಕುಂದಾ ಗ್ರಾಮದ ಬಳಿ ಕಾಗಿಣಾ ನದಿಯಿಂದ ಸ್ವಲ್ಪ ಮುಂದೆ ನೀರಿನ ಮೇಲೆ ತೇಲಾಡುತ್ತಿದ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಳಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ತೆ ಕಾರ್ಯಾಚರಣೆಯಲ್ಲಿ ಸಿಪಿಐ ಮಹಾದೇವ್ ದಿಡ್ಡಿಮನಿ, ಮಳಖೇಡ್ ಠಾಣೆಯ ಪಿಎಸ್ಐ ಸಂಗಮೇಶ್ ಅಂಗಡಿ, ಎಎಸ್ಐ ಹಣಮಂತ್ ಲೋಹರ್, ಮುಖ್ಯ ಪೇದೆ ಆಸಿಫ್, ಅಗ್ನಿಶಾಮಕದಳದ ಅಧಿಕಾರಿ ಮಲ್ಲಕಪ್ಪ, ರವೀಂದ್ರ ರೆಡಿ, ಬಸಪ್ಪ ಎಮ್., ಶರಣಯ್ಯ ಗುತ್ತೇದಾರ್, ಮಸ್ತಾನ್ ಅಲಿ, ನರೇಂದ್ರ, ಭಾರತ್ ಟಿ., ಮುಂತಾದವರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News