ಕಲಬುರಗಿ | ಗುರುನಾನಕ್‌ರ ತತ್ವಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಬೆಳಗಿಸಿವೆ : ಬಾಲಚಂದ್ರ ಅಡ್ವಾನಿ
ಕಲಬುರಗಿ : ಗುರುನಾನಕ್‌ರ ತತ್ವಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಬೆಳಗಿಸಿವೆ ಅವರು ಯಾವುದೇ ಜಾತಿಗೆ ಸೀಮಿತವಾಗಿರದೆ ಇಡೀ ಮಾನವ ಕುಲಕ್ಕೆ ಸಾಮರಸ್ಯ ಬಂಧುತ್ವದ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಅವರ ತತ್ವ ಮತ್ತು ಸಂದೇಶಗಳoತೆ ನಾವೆಲ್ಲರೂ ಮುನ್ನೆಡೆಯಬೇಕಾಗಿದೆ ಎಂದು ಸಿಂಧಿ ಸಮುದಾಯದ ಹಿರಿಯ ಮುಖಂಡ ಜೋದಾರಾಮ ಬಾಲಚಂದ್ರ ಅಡ್ವಾನಿ ಅವರು ಹೇಳಿದ್ದಾರೆ.
ಆಳಂದ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡ ಗುರುನಾನಕ್ ಅವರ 555ನೇ ಜಯಂತಿಯ ನಿಮಿತ್ತ ಗುರುನಾನಕ್‌ರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಕೈಗೊಂಡು ಅವರು ಮಾತನಾಡಿದರು.
ಗುರುನಾನಕ್ ಅವರ ಮಾರ್ಗದರ್ಶನದಲ್ಲಿ ದೇಶದ ಸಾಂಸ್ಕೃತಿಕ ತತ್ವಗಳನ್ನು ಉಳಿಸಲು ಮತ್ತು ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಅಗತ್ಯವಾಗಿದೆ. "ಅವರು ಪಾರಮ್ಯ ಮತ್ತು ಸಹಿಷ್ಣುತೆ ಬಗ್ಗೆ ಸಾಕಷ್ಟು ಪಾಠಗಳನ್ನು ಕಲಿಸಿಕೊಟ್ಟಿದ್ದಾರೆ. ನಮಗೆ ಇಂದಿಗೂ ಅವರ ನೈತಿಕ ತತ್ವಗಳು ಪ್ರೇರಣೆಯಾಗಿವೆ. ಭಾರತೀಯ ಸಾಮಾಜಿಕ ನೈತಿಕತೆ ಹಾಗೂ ಧಾರ್ಮಿಕ ಒಗ್ಗಟ್ಟನ್ನು ಕಾಪಾಡಲು ಸರಕಾರಗಳು, ಸಮಾಜ ಮತ್ತು ನಾಗರಿಕರು ಜವಾಬ್ದಾರಿಯನ್ನು ಪಾಲಿಸಬೇಕಿದೆ" ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಮಹಾದೇವ ವಡಗಾಂವ, ಎಚ್ಡಿಎಫ್ಸಿ ಶಾಖೆಯ ವ್ಯವಸ್ಥಾಪಕ ಸುನಿಲ್ಕುಮಾರ್ ಎಸ್.ಪಂಡಿತ, ಉದ್ಯಮಿ ಸಂಜಯ ಎಸ್.ದೇಶಮುಖ, ವಿಶಾಲ್ ಎ.ಗಾಂಧಿ, ಕಿಶೋರ ಕೇಶವಾನಿ, ಮನೋಜ ಜೈನ್, ಮಿಥುನ ಚಿಂಚೋಳಿ, ಯುವ ಉದ್ಯಮಿ ಸಾಹಿಲ್ ದೇವಾನಂದ ಅಡ್ವಾನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.