ಟೂರ್ನಿ ಅಚ್ಚುಕಟ್ಟಾಗಿ ನಿಭಾಯಿಸಿ: ಪೂರ್ವಸಿದ್ಧತಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ನವೆಂಬರ್ 17 ರಿಂದ 24ರ ವರೆಗೆ ನಡೆಯಲಿರುವ ಐಟಿಎಫ್-2024 ಕ್ರೀಡಾಕೂಟಕ್ಕೆ ಈಗಾಗಲೇ, ಜಿಲ್ಲಾಡಳಿತ ಸಿದ್ಧಗೊಂಡಿದೆ. ಎಲ್ಲಾ ಸಮಿತಿಯ ಮುಖ್ಯಸ್ಥರು ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಐಟಿಎಫ್ ಕ್ರೀಡಾಕೂಟಕ್ಕೆ ದೇಶಿಯ ಹಾಗೂ ವಿದೇಶಿಯ ಆಟಗಾರರು ಆಗಮಿಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ 15ಕ್ಕೂ ಹೆಚ್ಚು ವಿದೇಶಿ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕ್ರೀಡಾಪಟುಗಳಿಗೆ ಕ್ರೀಡಾಂಗಣ, ಸಾರಿಗೆ ವ್ಯವಸ್ಥೆ, ಗುಣಮಟ್ಟದ ಊಟೋಪಹಾರ, ವಸತಿ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಸಮಿತಿಯ ಮುಖ್ಯಸ್ಥರು ಮುತುವರ್ಜಿ ವಹಿಸಬೇಕು ಎಂದು ತಾಕೀತು ಮಾಡಿದರು.
ಪಂದ್ಯಾವಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು 14 ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಹಣಕಾಸು ಸಮಿತಿ, ಸ್ವಾಗತ ಸಮಿತಿ, ಇಂಟರ್ನೆಟ್ ಸಮಿತಿ ಮತ್ತು ದೈನಂದಿನ ಚಟುವಟಿಕೆಗಳ ಉಸ್ತುವಾರಿ ಸಮಿತಿ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ. ಯಾವುದೇ ರೀತಿಯ ನ್ಯೂನತೆಗಳಾದಂತೆ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಶ್ರಮಿಸುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಅಯುಕ್ತ ಭುವನೇಶ ದೇವಿದಾಸ ಪಾಟೀಲ, ಡಿಸಿಪಿ ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಜಿಲ್ಲಾಮಟ್ಟದ ಅಧಿಕಾಗಳಾದ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಡಿಎಚ್.ಓ. ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಪಂಚಾಯತ್ ನಿರ್ದೇಶಕ ಜಗದೇವಪ್ಪ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ಅಬ್ದುಲ್ ಅಝೀಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಕುಂದಳ್ಳಿ, ಪೊಲೀಸ್ ಇಲಾಖೆ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.