ಕಲಬುರಗಿ | ಪೋಕ್ಸೊ ಪ್ರಕರಣ : ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
ಕಲಬುರಗಿ : ಬಾಲಕಿಯನ್ನು ಪುಸಲಾಯಿಸಿ ಮುಂಬೈಗೆ ಅಪಹರಿಸಿಕೊಂಡು ಹೋಗಿ ನಿರಂತರ ಅತ್ಯಾಚಾರ ಎಸಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ವಿವಿಧ ಕಾಯ್ದೆಗಳಡಿ 28 ಸಾವಿರ ರೂ. ದಂಡ ವಿಧಿಸಿ, ಆದೇಶ ಪ್ರಕಟಿಸಿದೆ.
ಕಮಲಾಪುರ ತಾಲ್ಲೂಕಿನ ಮುರುಡಿ ಗ್ರಾಮದ ಶಿವಾನಂದ ಸುಭಾಷ್ ಧನ್ನೂರೆ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಮಹಾಗಾಂವ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ 2022ರ ಮಾರ್ಚ್ 11ರಂದು ಅಲ್ಲಿನ ಕೆರೆಯ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಆಕೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಕಲಬುರಗಿ, ಆಳಂದ ಮಾರ್ಗವಾಗಿ ಮಹಾರಾಷ್ಟ್ರದ ಉಮರ್ಗಾಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಂದ ಬಸ್ ಮೂಲಕ ಮುಂಬೈಗೆ ಪ್ರಯಾಣಿಸಿದ್ದಾನೆ. ಬಳಿಕ ಅಲ್ಲಿ ಇಬ್ಬರೂ ಗಂಡ, ಹೆಂಡತಿ ಎಂದು ಹೇಳಿ ಮನೆ ಬಾಡಿಗೆಗೆ ಪಡೆದುಕೊಂಡು 2022ರ ಮಾರ್ಚ್ 12ರಿಂದ ಡಿಸೆಂಬರ್ 11ರವರೆಗೆ ಅಕ್ರಮ ಬಂಧನದಲ್ಲಿಟ್ಟು, ಅತ್ಯಾಚಾರ ಎಸಗಿದ್ದಾನೆ.
ಈ ಬಗ್ಗೆ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಬಸವರಾಜ ತೇಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು, ಅಪರಾಧಿಗೆ ಪೋಕ್ಸೊ ಕಾಯ್ದೆ ಹಾಗೂ ಐಪಿಸಿ ಕಲಂಗಳಡಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.