ಕಲಬುರಗಿ | ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.17ರಂದು ಧರಣಿ ಸತ್ಯಾಗ್ರಹ : ಡಾ.ಕೆ.ಎಂ.ಸಂದೇಶ
ಕಲಬುರಗಿ : ಸೇಡಂ ತಾಲೂಕಿನ ಮಳಖೇಡ ಗ್ರಾಮದ ರಾಜಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ.17 ರಂದು ಇಲ್ಲಿನ ಸೇಡಂ ರಸ್ತೆಯ ಕಾರ್ಮಿಕರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ಎಂ.ಸಂದೇಶ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರ್ಜುನ್ ರೋಡವೇಸ್ ಹಾಗೂ ಮಹಾರಾಜ ಗ್ರೂಪ್ ಹೆಸರಿನ ಗುತ್ತಿಗೆದಾರರು ಕಳೆದ ಹಲವು ವರ್ಷಗಳಿಂದ ಕಾರ್ಮಿಕರಿಗೆ ಯಾಮಾರಿಸಿ ಜೀತ ಪದ್ದತಿಯಂತೆ ದುಡಿಸಿಕೊಳ್ಳುತ್ತಲೇ ಇದ್ದಾರೆ, 300ಕ್ಕಿಂತ ಹೆಚ್ಚಿನ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಸಹ ನೀಡದೆ, ಕಾಲಿಂಗ್ ಡ್ಯೂಟಿ ನೀಡಿ ಸಿಕ್ಕಾಪಟ್ಟೆ ತೊಂದರೆ ನೀಡುತ್ತಿದ್ದಾರೆ, ಇದರ ವಿರುದ್ಧ ಹೋರಾಟ ಮಾಡಿದ ನಮ್ಮ ಸಂಘಟನೆಯ ವಿರುದ್ಧವೇ ಸ್ಟೇ ತಂದಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
ಕಾರ್ಮಿಕರ ಸಮಸ್ಯೆ ಕುರಿತು ಲೇಬರ್ ಕಮೀಷನರ್ ಆಫೀಸ್ ಮತ್ತು ಕಂಪನಿಯ ಹಚ್.ಆರ್ ಅವರಿಗೆ ಮನವಿ ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅರ್ಜುನ ರೋಡವೇಸ್ ಮತ್ತು ಮಹಾರಾಜ ಗ್ರೂಫ್ ಅವರ ಮೇಲೆ ಕಾನೂನಿನ ಕ್ರಮ ಕೈಗೊಂಡು ಅವರ ಲೈಸೆನ್ಸ್ ರದ್ದು ಮಾಡಿ ಕಪ್ಪು ಪಟ್ಟಿಯಲ್ಲಿ ಹಾಕಬೇಕು, ಕೇಂದ್ರ ಕಾರ್ಮಿಕ ಇಲಾಖೆಯ ಪ್ರಕಾರ ಕಾರ್ಮಿಕರಿಗೆ ಕನಿಷ್ಠ ವೇತನ, ಇ.ಎಸ್.ಐ, ಪಿ.ಎಫ್, ಸೇರಿದಂತೆ ವಿವಿಧ ಇತರೆ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬುದ್ದೇಶ ಸಿಂಗೆ, ಎನ್.ಕೆ.ಅರ್ಜುನ, ಭಾಗೇಶ, ಸಂಜಯ ರಾಜು, ಮಲ್ಲಿಕಾರ್ಜುನ ಕಲಕಟ್ಟಿಷ ಚಿದಾನಂದ ಕಟ್ಟಿ ಸೇರಿದಂತೆ ಮತ್ತಿತರರು ಇದ್ದರು.