ವಕ್ಫ್‌ ಅದಾಲತ್ ಕಾಟಾಚಾರಕ್ಕಲ್ಲ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು : ಸಚಿವ ಝಮೀರ್ ಅಹ್ಮದ್

Update: 2024-09-19 12:04 GMT

ಕಲಬುರಗಿ :‌ ವಕ್ಫ್ ಅದಾಲತ್ ಕಾಟಾಚಾರಕ್ಕೆ ಮಾಡುತ್ತಿಲ್ಲ.ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವಕ್ಫ್ ಅದಾಲತ್ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಪ್ರತಿ ಜಿಲ್ಲೆಯಲ್ಲಿ ವಕ್ಫ್ ಅದಾಲತ್ ನಡೆಸುತ್ತಿದ್ದು ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಉಡಾಫೆ ಧೋರಣೆ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾತೆ, ಒತ್ತುವರಿ ತೆರವು, ಖಬರಸ್ಥಾನ ವಿಚಾರಗಳಿಗೆ ಸಂಬಂಧಿಸಿದ ಮನವಿಗಳ ಬಗ್ಗೆ ಇನ್ನೊಂದು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗಡುವು ನೀಡಿದರು.

ಜಿಲ್ಲಾ ವಕ್ಫ್ ಅಧಿಕಾರಿಗಳು ಆಸ್ತಿ ಸಂರಕ್ಷಣೆ ಹಾಗೂ ಒತ್ತುವರಿ ತೆರವು ವಿಷಯದಲ್ಲಿ ಅಸಡ್ಡೆ ತೋರುತ್ತಿದ್ದು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.

ಜಿಲ್ಲಾ ವಕ್ಫ್ ಅಧಿಕಾರಿಗಳು ನಿರಂತರವಾಗಿ ಜಿಲ್ಲಾಡಳಿತ ಜತೆ ಸಂಪರ್ಕದಲ್ಲಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ವಕ್ಫ್ ಆಸ್ತಿ ದೇವರ ಆಸ್ತಿ. ಇದನ್ನು ರಕ್ಷಣೆ ಮಾಡುವುದು ಪುಣ್ಯದ ಕೆಲಸ. ವಕ್ಫ್ ಅದಾಲತ್ ನಿಂದ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾಕಷ್ಟು ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಸಿಇಒ ಜಿಲಾನಿ ಮೊಕಾಶಿ , ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನಮ್, ಎಸ್.ಪಿ.ಶ್ರೀನಿವಾಸುಲು, ಯಾದಗಿರಿ ಜಿಲ್ಲಾಧಿಕಾರಿ ಸುಶೀಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News