ಪ್ರಾದೇಶಿಕ ಆರೋಗ್ಯ ಕೇಂದ್ರವಾಗಿ ಕಲಬುರಗಿ ಅಭಿವೃದ್ಧಿ : ಸಿಎಂ ಸಿದ್ದರಾಮಯ್ಯ

Update: 2024-09-17 14:05 GMT

ಕಲಬುರಗಿ : ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಶಯದಂತೆ ಕಲಬುರಗಿಯನ್ನು ಪ್ರಾದೇಶಿಕ ಆರೋಗ್ಯ ಕೇಂದ್ರವನ್ನಾಗಿಸುವತ್ತ ನಮ್ಮ ಸರಕಾರ ಹೆಜ್ಜೆ ಇಟ್ಟಿದೆ. ಸಾರ್ವಜನಿಕರು ಇಲ್ಲಿಂದ ಬೆಂಗಳೂರು, ಮುಂಬೈ, ಹೈದರಾಬಾದಿಗೆ ಹೋಗುವುದನ್ನು ತಪ್ಪಿಸಿ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡುವುದು ಇದರ ಮೂಲ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಅಂಗವಾಗಿ ಕಲಬುರಗಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ವಿವಿಧ ಹಂತದ ಆಸ್ಪತ್ರೆಗಳ ಕಾಮಗಾರಿಗಳನ್ನು ಆರೋಗ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನಲ್ಲಿ 220 ಕೋಟಿ ರೂ. ಗಳ ವಿಶೇಷ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‍ಡಿಬಿ) ಒದಗಿಸುತ್ತಿದೆ. ಕಲ್ಯಾಣ ಕರ್ನಾಟಕದ ಆಸ್ಪತ್ರೆಗಳಿಗೆ 50 ಹೊಸ ಆಂಬ್ಯುಲೆನ್ಸ್‌ ಗಳನ್ನು ಒದಗಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೆಕೆಆರ್‍ಡಿಬಿಯ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 262 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಈಗಾಗಲೆ ಅನುಮೋದನೆ ನೀಡಿದ್ದು, ಅಂತಿಮ ಘಟ್ಟದ ಕೆಲಸ ಭರದಿಂದ ಸಾಗಿದೆ. ಶೀಘ್ರವೇ ಇದನ್ನು ಈ ಪ್ರದೇಶಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕಲಬುರಗಿಯಲ್ಲಿ 221 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 72 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ 75 ಕೋಟಿ ರೂ. ಅನುದಾನ ನೀಡಲು ಕೆ.ಕೆ.ಆರ್.ಡಿ.ಬಿ. ಮಂಡಳಿ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದರು.

ಕಲಬುರಗಿ ನಗರದಲ್ಲಿ ಈ ಹಿಂದೆ ನಮ್ಮ ಸರಕಾರದ ಅವಧಿಯಲ್ಲಿಯೆ ಜಿಮ್ಸ್ ವೈದ್ಯಕೀಯ ಕಾಲೇಜು, ಜಯದೇವ ಆಸ್ಪತ್ರೆ, ಇತ್ತೀಚೆಗೆ ಟ್ರಾಮಾ ಸೆಂಟರ್‌ ಗಳನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತಿದೆ. ಇದಲ್ಲದೆ ಪ್ರಗತಿಯಲ್ಲಿರುವ 163 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ಶೀಘ್ರ ಸಾರ್ವಜನಿಕರ ಬಳಕೆಗೆ ಬರಲಿದೆ. 30 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ ಮತ್ತು 15.6 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಸಾಮರ್ಥ್ಯದ ಸುಟ್ಟ ಗಾಯಗಳ ಘಟಕಕ್ಕೆ ಇತ್ತೀಚೆಗೆ ಅಡಿಗಲ್ಲು ಹಾಕಲಾಗಿದೆ ಎಂದು ಅವರು ಹೇಳಿದರು.

ಕೆಕೆಆರ್‍ಡಿಬಿ ಈ ವರ್ಷ ‘ಅಕ್ಷರ ಆವಿಷ್ಕಾರ’ ಕಾರ್ಯಕ್ರಮಕ್ಕೆ 1250 ಕೋಟಿ ರೂ. ಮೀಸಲಿಟ್ಟಿದೆ. ಈ ವರ್ಷ 1008 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಎಂಬ ಹೊಸ ಮಾದರಿಯನ್ನು ಪ್ರಾರಂಭಿಸಲಾಗಿದೆ. ನಮ್ಮ ನಿರೀಕ್ಷೆ ಮೀರಿ 36,445 ಮಕ್ಕಳು ಪ್ರವೇಶ ಪಡೆದು ದಾಖಲೆ ಬರೆದಿದ್ದಾರೆ. ಇದಕ್ಕಾಗಿ ಹೊಸದಾಗಿ 1353 ಅತಿಥಿ ಶಿಕ್ಷಕರನ್ನು ಹಾಗೂ 892 ಸಹಾಯಕಿಯರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಭಾಗದ 872 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಕಲಿಕೆಯನ್ನೂ ಪ್ರಾರಂಭಿಸಿದ್ದೇವೆ. 306 ಪ್ರೌಢಶಾಲೆಗಳಲ್ಲಿ ಈ ವರ್ಷ 9ನೇ ತರಗತಿಯ ಮಕ್ಕಳ ಕೌಶಲ್ಯ ವೃದ್ಧಿಗಾಗಿ ಕಂಪ್ಯೂಟರ್ ಕಲಿಕೆಯನ್ನು ಪ್ರಾರಂಭಿಸಿದ್ದೇವೆ. ಈ ವರ್ಷ “ಕಲಿಕಾಸರೆ” ಎಂಬ ಹೆಸರಿನಲ್ಲಿ ವಿಶೇಷ ಅಭ್ಯಾಸ ಪುಸ್ತಕವನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಲಬುರಗಿಯಲ್ಲಿ ನೈಸ್ ಅಕಾಡೆಮಿ ಸಂಸ್ಥೆ ನಿರ್ಮಿಸಲಾಗಿದ್ದು, ಪ್ರತಿ ವರ್ಷ ಸುಮಾರು 2 ಸಾವಿರ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಹಾಗೂ ರಾಜ್ಯ ಸರಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಜ್ಞಾನ ಕೇಂದ್ರಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ರಾಯಚೂರು ಮತ್ತು ಯಾದಗಿರಿಯಲ್ಲಿ ವಿಜ್ಞಾನ ಕೇಂದ್ರ/ ತಾರಾಲಯಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಉದ್ಯೋಗ ಆವಿಷ್ಕಾರ ಯೋಜನೆಯಡಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ 25 ಸಾವಿರ ಮಕ್ಕಳಿಗೆ ಕಲಿಕೆ ಜೊತೆ ಕೌಶಲ್ಯ, ಸಿಡಾಕ್ ಹಾಗೂ “ಇಂಡಸ್ಟ್ರಿ ಲಿಂಕೇಜ್ ಸೆಲ್” ಮುಖಾಂತರ ತರಬೇತಿ ನೀಡಲಾಗುತ್ತಿದೆ. ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ಆಧಾರಿತ ಕೌಶಲ್ಯ ನೀಡಲು ಕಲಬುರಗಿ ಮತ್ತು ಕೊಪ್ಪಳದ ತಳಕಲ್‍ನಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮಂಡಳಿಯಿಂದ ತಲಾ 60 ಕೋಟಿ ರೂ. ಹಣ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ನದಿಸಿನ್ನೂರ-ಹೊನ್ನಕಿರಣಗಿ ಬಳಿ 1 ಸಾವಿರ ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ 1 ಲಕ್ಷ ಜನರಿಗೆ ನೇರ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಅವರು ಹೇಳಿದರು.

ಬೀದರ್ ಹಾಗೂ ಬೆಂಗಳೂರು ನಡುವೆ ಆರ್ಥಿಕ ಕಾರಿಡಾರ್ ಅಭಿವೃದ್ಧಿಪಡಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸಲು ಕ್ರಮ ವಹಿಸಲಾಗುತ್ತಿದೆ. 20 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ಸರಕಾರಿ(ಪುರುಷರ) ಐ.ಟಿ.ಐ. ತರಬೇತಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಟ್ಟು 44 ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅಂದಾಜು ಮೊತ್ತ 8,290 ಕೋಟಿ ರೂಪಾಯಿಗಳಿಗೆ 2,283 ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News