ಕಲಬುರಗಿ | ಮಹಿಳೆಯನ್ನು ಕೊಲೆಗೈದು ಸುಟ್ಟು ಹಾಕಿದ ಪ್ರಕರಣ; ಮೂವರು ಆರೋಪಿಗಳ ಬಂಧನ
ಕಲಬುರಗಿ: ಸಮೀಪದ ಇಟಗಾ ಗ್ರಾಮದ ಬಳಿ ಮಹಿಳೆಯೊಬ್ಬರನ್ನು ಕೊಲೆಗೈದು ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಲೆಯಾದ ಜ್ಯೋತಿ ಎಂಬವರ ಪತಿ ಮಂಜುನಾಥ ಚಿನಮಳ್ಳಿ, ಪ್ರಶಾಂತ್ ಹಾಗೂ ಬೆನ್ನೂರಿನ ವಿಜಯಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.
ಕಲಬುರಗಿ ನಗರದ ಸಂಗಮೇಶ್ವರ ಕಾಲನಿಯ ನಿವಾಸಿಯಾಗಿರುವ ಜ್ಯೋತಿ ಮತ್ತು ಪತಿ ಮಂಜುನಾಥ್ ಇಬ್ಬರೂ 2018ರಿಂದ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಇಬ್ಬರ ಮಧ್ಯೆ ಹಲವು ಜಗಳವಾಗಿದ್ದು, ಅನೇಕ ಬಾರಿ ನ್ಯಾಯಾಲಯಕ್ಕೆ ಮೊರೆ ಹೋಗಿರುವುದು ತಿಳಿದುಬಂದಿದೆ ಎಂದು ಹೇಳಿದರು.
ಡಿಸ್ಟ್ರಿಬ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮಂಜುನಾಥ್ ತನ್ನ ಸಹಚರರೊಟ್ಟಿಗೆ ಪತ್ನಿ ಜ್ಯೋತಿಯನ್ನು ಅಪಹರಿಸಿ ಬಳಿಕ ಕಾರಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿಗಳು ಸೇರಿ ಮೃತದೇಹವನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ. ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಉಪಸ್ಥಿತರಿದ್ದರು.