ಕಲಬುರಗಿ | ಸಿಎಂ ಕಾರಿಗೆ ಮುತ್ತಿಗೆ ಹಾಕಲು ಯತ್ನ ; ರೈತ ಮುಖಂಡರು ಪೊಲೀಸ್ ವಶಕ್ಕೆ
Update: 2024-12-22 07:36 GMT
ಕಲಬುರಗಿ : ನೆಟೆ ರೋಗದಿಂದ ಹಾನಿಯಾದ ತೊಗರಿ ಬೆಳೆದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ರೈತ ಮುಖಂಡರು ಇಲ್ಲಿನ ಅನ್ನಪೂರ್ಣ ಕ್ರಾಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ನಡೆದಿದೆ.
ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ತೊಗರಿ ಬೆಳೆ ನಷ್ಟವಾಗಿದೆ. ಇದರಿಂದ ರೈತರು ಭಾರೀ ಸಂಕಷ್ಟದಲ್ಲಿದ್ದಾರೆ. ಕೂಡಲೇ ಪರಿಹಾರ ಮತ್ತು ವಿಶೇಷ ಪ್ಯಾಕೇಜ್ ಅನುದಾನದಡಿ 35 ಕೋಟಿ ರೂ. ಘೋಷಿಸುವಂತೆ ಆಗ್ರಹಿಸಿ, ರೈತ ಮುಖಂಡರು ಸಿಎಂ ಕಾರಿಗೆ ಮತ್ತೆ ಹಾಕಲು ನಿಂತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ರೈತರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಎಂ.ಬಿ.ಸಜ್ಜನ್, ರಾಯಪ್ಪ, ದಿಲೀಪ್ ನಾಗೊರೆ, ಗೋಪಾಲ್, ಇಸ್ಮಾಯಿಲ್ ಸೇರಿದಂತೆ ಹಲವು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕರೆದೊಯ್ದರು.